ಲೋಕಸಭಾ ಸಮರ | ಗುಜರಾತ್ ಮತ್ತು ಯುಪಿಯಲ್ಲಿ ಬಿಜೆಪಿ ವಿರುದ್ಧ ಸೆಟೆದು ನಿಂತರು ರಜಪೂತರು!

Date:

Advertisements
ಬಿಜೆಪಿಯಲ್ಲಿ ಮಹಾನ್ ವ್ಯಕ್ತಿತ್ವಗಳ ಕೊರತೆಯಿದೆ. ಹೀಗಾಗಿ ‘ಮಹಾಪುರುಷರ ವಿತರಣ ಯೋಜನೆ’ಯನ್ನು ಹಮ್ಮಿಕೊಂಡಿದೆ. ತನ್ನ ವೋಟು ಬ್ಯಾಂಕು ನಿರ್ಮಿಸಿಕೊಳ್ಳಲು ಕ್ಷತ್ರಿಯ ಮಹಾಪುರುಷರನ್ನು ಇತರೆ ಜಾತಿಗಳು ಸಮುದಾಯಗಳಿಗೆ ಹಂಚಿಕೊಡುತ್ತಿದೆ. ಮಿಹಿರಭೋಜನನ್ನು ಗುರ್ಜರರಿಗೂ, ಮೊಘಲ್ ಕಾಲದ ಸಮರವೀರ ದುರ್ಗಾದಾಸ್ ರಾಠೋಡನನ್ನು ಗಾಣಿಗ ಜಾತಿಗೂ ಹಂಚಲಾಗಿದೆ ಎಂದು ರಜಪೂತರು ಆರೋಪಿಸಿದ್ದಾರೆ.

 

ರಜಪೂತರೊಂದಿಗೆ ಹೋಲಿಸಿ ದಲಿತರನ್ನು ಹೊಗಳಿದ ನಿರುಪದ್ರವಿ ಟಿಪ್ಪಣಿಯೊಂದು ಬೆಟ್ಟವಾಗಿ ಬೆಳೆದು ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಮಂತ್ರಿ ಪರ್ಷೋತ್ತಮ ರೂಪಾಲ ಅವರನ್ನು ಕಾಡತೊಡಗಿದೆ.

ಸಿಡಿದೆದ್ದಿರುವ ರಜಪೂತ ಸಮುದಾಯ ರೂಪಾಲ ಅವರ ಟಿಕೆಟ್ ಕಿತ್ತುಕೊಂಡು ಬೇರೆ ಹುರಿಯಾಳನ್ನು ಹೂಡುವಂತೆ ಬಿಜೆಪಿಯ ಮೇಲೆ ಭಾರೀ ಒತ್ತಡ ಹೇರತೊಡಗಿದೆ. ರೂಪಾಲ ಅವರ ಗೋಗರೆದು ಕ್ಷಮೆ ಕೇಳಿದರೂ ಜಗ್ಗಿಲ್ಲ. ತಮ್ಮ ಶಾಂತಿ ಸಂಧಾನದ ಪ್ರಯತ್ನಗಳಿಗೆ ಬಗ್ಗದ ರಜಪೂತರ ಆಗ್ರಹಕ್ಕೆ ಬಿಜೆಪಿ ಹುದ್ದರಿಗಳು ಸೊಪ್ಪು ಹಾಕಿಲ್ಲ.

ರಜಪೂತರನ್ನು ಅವಮಾನಿಸಿ ಪರ್ಷೋತ್ತಮ ರೂಪಾಲ ಹೇಳಿದ್ದಾದರೂ ಏನು?
‘..ರಾಜಾಧಿರಾಜರು ಬ್ರಿಟಿಷರ ಜೊತೆ ಸಹಭೋಜನ ಮಾಡಿದ್ದರು, ಅಷ್ಟೇ ಅಲ್ಲ, ತಮ್ಮ ಹೆಣ್ಣುಮಕ್ಕಳನ್ನು ಬ್ರಿಟಿಷರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ರಾಜಾಧಿರಾಜರಿಗೆ ಹೋಲಿಸಿದರೆ ನಮ್ಮ ರೂಖಿ ಸಮಾಜವೇ (ಗುಜರಾತಿನ ದಲಿತ ಪಂಗಡ) ಲೇಸು, ಅತಿ ಹೆಚ್ಚು ಹಿಂಸೆ ಕಿರುಕುಳಗಳಿಗೆ ಗುರಿಯಾದರೂ, ಬ್ರಿಟಿಷರೊಂದಿಗೆ ವೈವಾಹಿಕ ಸಂಬಂಧ ಬೆಳೆಸಲಿಲ್ಲ, ಬದಲಿಗೆ ಬೆನ್ನು ಸೆಟೆಸಿ ನಿಂತರು…’ಎಂಬುದು ರೂಪಾಲ ಕಳೆದ ಮಾರ್ಚ್ 22ರಂದು ಮಾಡಿದ್ದ ಹೇಳಿಕೆಯಾಗಿತ್ತು.

Advertisements

ಈ ವಿವಾದ ಭುಗಿಲೇಳುವ ತನಕ ಬಿಜೆಪಿಯ ಪಾಲಿಗೆ ಅತ್ಯಂತ ಸುರಕ್ಷಿತ ಲೋಕಸಭಾ ಕ್ಷೇತ್ರವೆನಿಸಿತ್ತು ರಾಜಕೋಟ್. 2009ರಲ್ಲಿ ಒಮ್ಮೆ ಕಾಂಗ್ರೆಸ್ ಉಮೇದುವಾರನನ್ನು ಗೆಲ್ಲಿಸಿದ್ದು ಬಿಟ್ಟರೆ 1989ರಿಂದ ಬಿಜೆಪಿಯ ಕೈ ಬಿಟ್ಟಿಲ್ಲ. ಒಟ್ಟು 20 ಲಕ್ಷ ಮತದಾರರ ಈ ಕ್ಷೇತ್ರದಲ್ಲಿ ರಜಪೂತ ಮತದಾರರ ಸಂಖ್ಯೆ ಸುಮಾರು ಒಂದೂವರೆ ಲಕ್ಷ. ಹೀಗಾಗಿ ಅವರನ್ನು ಸುಲಭಕ್ಕೆ ನಿರ್ಲಕ್ಷಿಸಲು ಬಾರದು.

Advertisements
Bose Military School

ಆದರೂ ರಜಪೂತರ ಸಿಟ್ಟನ್ನು ತಳ್ಳಿ ಹಾಕಿರುವ ಬಿಜೆಪಿ ಆತ್ಮವಿಶ್ವಾಸಕ್ಕೆ ಆಧಾರವಿದೆ. ಇಡೀ ರಾಜ್ಯದ ರಾಜಕೀಯ ಚಿತ್ರವನ್ನು ನೋಡಿದರೆ ಪಾಟೀದಾರ ಅಥವಾ ಪಟೇಲ್ ಮತದಾರರ ಪ್ರಮಾಣ ಶೇ.14-16. ಏಳು ಲೋಕಸಭಾ ಸೀಟುಗಳಲ್ಲಿ ಪಾಟೀದಾರರ ಮತಗಳು ನಿರ್ಣಾಯಕ. ರಜಪೂತರ ಪ್ರಮಾಣ ಶೇ.5-6. ರಾಜಕೋಟ್ ನಲ್ಲಿ ಪಾಟೀದಾರ ಸಮುದಾಯದ ಮತದಾರರು ಐದು ಲಕ್ಷಗಳಷ್ಟಿದ್ದಾರೆ. ಪರ್ಷೋತ್ತಮ ರೂಪಾಲ ಇದೇ ಸಮುದಾಯಕ್ಕೆ ಸೇರಿದವರು. ಆದರೆ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪರೇಶ್ ಧನಾನಿ ಅವರದೂ ಇದೇ ಜಾತಿ. ಪಾಟೀದಾರರಲ್ಲಿ ಲೇವಾ ಮತ್ತು ಕಡವಾ ಎಂಬ ಎರಡು ಒಳಪಂಗಡಗಳಿವೆ. ಲೇವಾ ಪಂಗಡದ್ದೇ ದೊಡ್ಡ ಸಂಖ್ಯೆ-3.50 ಲಕ್ಷ. ಕಡವಾ ಪಟೇಲರು 1.91 ಲಕ್ಷದಷ್ಟಿದ್ದಾರೆ. ಕಾಂಗ್ರೆಸ್ಸಿನ ಪರೇಶ್ ಧನಾನಿ ಬಹುಸಂಖ್ಯಾತ ಲೇವಾ ಪಟೇಲ್ ಪಂಗಡಕ್ಕೂ, ರೂಪಾಲ ಕಡವಾ ಪಟೇಲ್ ಪಂಗಡಕ್ಕೂ ಸೇರಿದವರು. ಹೀಗಾಗಿ ಧನಾನಿ ತಮ್ಮ ಒಳಪಂಗಡದ ಶೇ.50ರಷ್ಟು ಮತಗಳನ್ನು ಪಡೆದರೂ ರೂಪಾಲ ಗೆಲುವಿನ ದಾರಿ ದುರ್ಗಮ ಆದೀತು.

ರೂಪಾಲ ಮತ್ತು ಧನಾನಿ ಇಬ್ಬರೂ ಅಮ್ರೇಲಿ ಜಿಲ್ಲೆಗೆ ಸೇರಿದವರು. ವಿಧಾನಸಭಾ ಚುನಾವಣೆಗಳಲ್ಲಿ ರೂಪಾಲ ಅವರನ್ನು ಹಲವಾರು ಸಲ ಸೋಲಿಸಿದ್ದಾರೆ ಧನಾನಿ.

ಸಿಟ್ಟಿಗೆದ್ದಿರುವ ರಜಪೂತರು ಕಾಂಗ್ರೆಸ್ಸಿಗೆ ಮತ ಹಾಕುತ್ತೇವೆಂದು ಹೇಳಿಲ್ಲ. ಹಾಗೆಯೇ ಪಾಟೀದಾರರು ಕಾಂಗ್ರೆಸ್ಸನ್ನು ದೂರ ಇರಿಸುತ್ತ ಬಂದಿದ್ದಾರೆ. ಅದರ ಹಿಂದೊಂದು ರಾಜಕೀಯ ಇತಿಹಾಸವಿದೆ. 1980ರ ದಶಕದಲ್ಲಿ ಅಂದಿನ ಕಾಂಗ್ರೆಸ್ ನಾಯಕ ಮಾಧವ ಸಿನ್ಹ ಸೋಲಂಕಿ ಕ್ಷತ್ರಿಯರು (ರಜಪೂತರು), ಹರಿಜನರು, ಆದಿವಾಸಿಗಳು ಹಾಗೂ ಮುಸಲ್ಮಾನರನ್ನು ಒಳಗೊಂಡ KHAM ಎಂಬ ಅತ್ಯಂತ ಯಶಸ್ವೀ ರಾಜಕೀಯ ಮೈತ್ರಿಕೂಟ ಕಟ್ಟಿದ್ದರು. ಕ್ಷತ್ರಿಯರನ್ನು (ರಜಪೂತರನ್ನು) ಸೇರಿಸಿಕೊಂಡಿದ್ದ ಈ ಮೈತ್ರಿಕೂಟದಿಂದ ಪಾಟೀದಾರರನ್ನು ಹೊರಗಿಡಲಾಗಿತ್ತು.

ಕಾರಣಗಳೇನೇ ಇರಲಿ, ರಜಪೂತರ ಆಕ್ರೋಶ ಚಹಾದ ಬಟ್ಟಲಿನಲ್ಲೆದ್ದ ಬಿರುಗಾಳಿ ಅಷ್ಟೇ. ಬಿಜೆಪಿಯೇ ಗೆಲ್ಲುತ್ತದೆ. ರಜಪೂತರ ಅಸಮಾಧಾನವು ಫಲಿತಾಂಶಗಳನ್ನು ಬದಲಿಸುವುದು ಸಾಧ್ಯವಿಲ್ಲ. ಪಾಟೀದಾರ ಅಭ್ಯರ್ಥಿಯ (ಪರ್ಷೋತ್ತಮ ರೂಪಾಲ) ವಿರುದ್ಧ ರಜಪೂತರು ಸಿಡಿದೆದ್ದಿರುವ ಅಂಶವು ಪಾಟೀದಾರ ಮತಗಳನ್ನು ಒಗ್ಗೂಡಿಸುವ ಸಾಧ್ಯತೆಯಿದೆ. ಕಡವಾ ಪಟೇಲ ಒಳಪಂಗಡಕ್ಕೆ ಸೇರಿದ ರೂಪಾಲ ಅವರಿಗೆ ಒಳಪಂಗಡ ಭೇದವನ್ನು ಮರೆತು ಲೇವಾ ಪಟೇಲರೂ ದೊಡ್ಡ ಸಂಖ್ಯೆಯಲ್ಲಿ ಮತ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕಲು ಬರುವುದಿಲ್ಲ ಎನ್ನುತ್ತಾರೆ ರಾಜಕೀಯ ವೀಕ್ಷಕರು.

ಗುಜರಾತಿನ ಎಲ್ಲ 26 ಸೀಟುಗಳಿಗೆ ಮೇ ಏಳರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 26 ಸೀಟುಗಳ ಪೈಕಿ ಸೂರತ್ ನ್ನು ಬಿಜೆಪಿ ಈಗಾಗಲೆ “ಅವಿರೋಧ”ವಾಗಿ ಗೆದ್ದುಕೊಂಡಿದೆ. ಸೂರತ್ ನ 19 ಲಕ್ಷ ಮತದಾರರಿಗೆ ಮತ ಚಲಾಯಿಸುವ ಅವಕಾಶವೇ ಇಲ್ಲ.

2014 ಮತ್ತು 2019ರಲ್ಲಿ ಗುಜರಾತಿನ ಎಲ್ಲ 26 ಲೋಕಸಭಾ ಸೀಟುಗಳನ್ನು ಮೋದಿ-ಶಾ ಬಿಜೆಪಿಯೇ ಬಾಚಿ ಗೆದ್ದಿದೆ. ಈ ಸಲ ಹ್ಯಾಟ್ರಿಕ್ ಸಾಧಿಸುವ ಎಲ್ಲ ಪ್ರಯತ್ನಗಳು ಜರುಗಿವೆ.

ನಿರುದ್ಯೋಗ, ರೈತರ ಕೈಗೆಟುಕಬಲ್ಲ ಬೆಳೆ ವಿಮೆ, ರೈತರ ಉತ್ಪನ್ನಗಳಿಗೆ ನ್ಯಾಯಯುತ ದರಗಳು, ನೀರಿನ ಕೊರತೆ ಈ ಕ್ಷೇತ್ರದ ಸಮಸ್ಯೆಗಳು. ಆದರೆ ಮೋದಿ ಮಂಕುಬೂದಿಯ ಮುಂದೆ ಜನರ ಕಡು ಕಠಿಣ ಸಮಸ್ಯೆಗಳೂ ಗೌಣ.
ಆದರೆ ಗುಜರಾತಿನ ಈ ಗೌಜು ಉತ್ತರಪ್ರದೇಶದ ಪಶ್ಚಿಮದಲ್ಲಿ ಪ್ರತಿಧ್ವನಿಸಿದೆ. 2001ರ ಹುಕುಮ್ ಸಿಂಗ್ ಆಯೋಗದ ವರದಿಯ ಪ್ರಕಾರ ಉತ್ತರಪ್ರದೇಶದಲ್ಲಿ ರಜಪೂತರ ಜನಸಂಖ್ಯೆ ಪ್ರತಿಶತ ಏಳರಿಂದ ಎಂಟರಷ್ಟು. ಒಂಭತ್ತನೆಯ ಶತಮಾನದ ರಾಜ ಮಿಹಿರ ಭೋಜ ನಮ್ಮವನೆಂದು ಉತ್ತರಪ್ರದೇಶದ ರಜಪೂತರು ಮತ್ತು ಗುರ್ಜರರು ಜಗಳಕ್ಕೆ ಬಿದ್ದಿದ್ದಾರೆ. ಈ ಜಗಳದಲ್ಲಿ ಬಿಜೆಪಿಯ ನಾಯಕರು ಗುರ್ಜರರ ಪಕ್ಷ ವಹಿಸಿರುವುದು, ಮಿಹಿರಭೋಜನನ್ನು ಗುರ್ಜರ ರಾಜನೆಂದು ಬರೆದಿರುವ ಶಿಲಾಫಲಕಗಳನ್ನು ಉದ್ಘಾಟಿಸಿರುವುದು ರಜಪೂತರನ್ನು ಕೆರಳಿಸಿದೆ. ಮಿಹಿರಭೋಜ ಕ್ಷತ್ರಿಯ ಕುಲದ ಪ್ರತೀಹಾರ ವಂಶಕ್ಕೆ ಸೇರಿದವನು. ಗುರ್ಜರ ದೇಶವನ್ನು ಆಳಿದನೆಂಬ ಕಾರಣಕ್ಕಾಗಿ ಆತನಿಗೆ ಗುರ್ಜರ ಎಂಬ ಬಿರುದು ಬಂದಿದೆಯೇ ವಿನಾ ಗುರ್ಜರ ಕುಲಕ್ಕೆ ಸೇರಿದವನೆಂದು ಅಲ್ಲ ಎಂಬುದು ರಜಪೂತರ ವಾದ.

‘ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಜಪೂತ ಜಾತಿಗೆ ಸೇರಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನೂ ಹೊಂದಿದ್ದಾರೆ. ಆದರೆ ಬಿಜೆಪಿ ಹೈಕಮಾಂಡು ಆದಿತ್ಯನಾಥ್ ಅವರು ಪ್ರಧಾನಿಯಾಗದಂತೆ ಮಸಲತ್ತು ನಡೆಸಿದೆ’ ಎಂಬುದೂ ರಜಪೂತರ ಸಿಟ್ಟುಗಳ ಪಟ್ಟಿಗೆ ಸೇರಿದೆ.

ಬಿಜೆಪಿಯಲ್ಲಿ ಮಹಾನ್ ವ್ಯಕ್ತಿತ್ವಗಳ ಕೊರತೆಯಿದೆ. ಹೀಗಾಗಿ ‘ಮಹಾಪುರುಷರ ವಿತರಣ ಯೋಜನೆ’ಯನ್ನು ಹಮ್ಮಿಕೊಂಡಿದೆ. ತನ್ನ ವೋಟು ಬ್ಯಾಂಕು ನಿರ್ಮಿಸಿಕೊಳ್ಳಲು ಕ್ಷತ್ರಿಯ ಮಹಾಪುರುಷರನ್ನು ಇತರೆ ಜಾತಿಗಳು ಸಮುದಾಯಗಳಿಗೆ ಹಂಚಿಕೊಡುತ್ತಿದೆ. ಮಿಹಿರಭೋಜನನ್ನು ಗುರ್ಜರರಿಗೂ, ಮೊಘಲ್ ಕಾಲದ ಸಮರವೀರ ದುರ್ಗಾದಾಸ್ ರಾಠೋಡನನ್ನು ಗಾಣಿಗ ಜಾತಿಗೂ ಹಂಚಲಾಗಿದೆ ಎಂದು ರಜಪೂತರು ಆರೋಪಿಸಿದ್ದಾರೆ.

ರಾಜಾ ಮಿಹಿರಭೋಜ ವಿವಾದದಲ್ಲಿ ಗುರ್ಜರರ ಪಕ್ಷ ವಹಿಸಿರುವ ಬಿಜೆಪಿಯು ರಜಪೂತರಿಗೆ ಸಾಕಷ್ಟು ಲೋಕಸಭಾ ಟಿಕೆಟ್ ನೀಡಿಲ್ಲ ಎಂಬುದು ಉತ್ತರಪ್ರದೇಶದ ರಜಪೂತರ ಮತ್ತೊಂದು ದೊಡ್ಡ ದೂರು. 2019ರ ಲೋಕಸಭಾ ಚುನಾವಣೆಗಳಲ್ಲಿ 14 ರಜಪೂತ ಉಮೇದುವಾರರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. 2024ರಲ್ಲಿ ಈ ಸಂಖ್ಯೆ ಒಂಭತ್ತಕ್ಕೆ ಕುಸಿದಿದೆ. ಪಶ್ಚಿಮೀ ಉತ್ತರಪ್ರದೇಶದಲ್ಲಿ ಈ ಸಂಖ್ಯೆ ನಾಲ್ಕರಿಂದ ಒಂದಕ್ಕೆ ತಗ್ಗಿದೆ.

ರಜಪೂತರು ಬಿಜೆಪಿಯ ಪಾರಂಪರಿಕ ಮತದಾರರು. ಆದರೆ ಪಶ್ಚಿಮ ಉತ್ತರಪ್ರದೇಶದಲ್ಲಿ ರಜಪೂತರ ಬಿಜೆಪಿ ವಿರೋಧಿ ಮಹಾಪಂಚಾಯಿತಿಗಳು ನಡೆಯುತ್ತಿವೆ. ಬಿಜೆಪಿಯನ್ನು ಬಹಿಷ್ಕರಿಸುವ ಕರೆಗಳು ಹೊರಬಿದ್ದಿವೆ. ರಜಪೂತ ಉತ್ಥಾನ ಸಭಾ, ಶ್ರೀ ರಜಪೂತ ಕರ್ಣಿ ಸೇನಾ ಹಾಗೂ ಕ್ಷತ್ರಿಯ ಯುವ ಲೋಕಮಂಚ್ ಕ್ಷತ್ರಿಯ ಚುನಾವ್ ಸಂಘರ್ಷ ಸಮಿತಿಯನ್ನು ಒಳಗೊಂಡ ಕ್ಷತ್ರಿಯ ಸಂಯುಕ್ತ ಚುನಾವ್ ಸಂಘರ್ಷ ಸಮಿತಿ ರಚನೆಗೊಂಡಿತ್ತು. ಬಿಜೆಪಿಯನ್ನು ಸೋಲಿಸಬಲ್ಲ ಯಾವುದೇ ಪಕ್ಷಕ್ಕೆ ಬೇಕಾದರೂ ಮತ ನೀಡಿ ಎಂದು ಕರೆ ಕೊಟ್ಟಿತ್ತು.

ಗೌತಮಬುದ್ಧ ನಗರ, ಮುಝಪ್ಫರ್ ನಗರ, ಮೇರಠ್, ಸಹಾರಣಪುರ ಹಾಗೂ ಘಾಝಿಯಾಬಾದ್ ಕ್ಷೇತ್ರಗಳಲ್ಲಿ ಈಗಾಗಲೆ ಮತದಾನ ಜರುಗಿದ್ದು, ರಜಪೂತರ ಸಿಟ್ಟು ಬಿಜೆಪಿಯನ್ನು ಎಷ್ಟರಮಟ್ಟಿಗೆ ಬೇಯಿಸಿವೆ ಎಂಬುದನ್ನು ಕಾದು ನೋಡಬೇಕಿದೆ.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು: ಏನದು ಸೆಪ್ಟೆಂಬರ್ ಕ್ರಾಂತಿ?

ಸೆಪ್ಟೆಂಬರ್ ಕ್ರಾಂತಿಯ ಕುತೂಹಲ ಹೆಚ್ಚಾಗಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಕೇಳಿಬಂದಿದೆ....

ಸಿಇಟಿ ಸೀಟ್‌ ಬ್ಲಾಕಿಂಗ್‌: ಅರ್ಹರಿಗೆ ಅವಕಾಶ ತಪ್ಪಲು ವ್ಯವಸ್ಥೆಯೇ ಶಾಮೀಲು?

ಸೀಟ್‌ ಬ್ಲಾಕಿಂಗ್‌ ಸಮಸ್ಯೆಯು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ...

ಇರಾನ್- ಇಸ್ರೇಲ್ ಕದನ; ಭಾರತದ ತಟಸ್ಥ ನಿಲುವು ಸರಿಯೇ?

ಜಗತ್ತು ಮೂರನೇ ಮಹಾಯುದ್ಧದಂಚಿನಲ್ಲಿದೆ ಎಂಬ ಆತಂಕದ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ...

Download Eedina App Android / iOS

X