ಒಂದು ವಾರದಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವಿಡಿಯೋ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಮತದಾನ ಮುಗಿಯುತ್ತಿದ್ದಂತೆ ಆರೋಪಿ ಪ್ರಜ್ವಲ್ ದೇಶ ತೊರೆದಿದ್ದಾನೆ. ಬೇರೆ ಬೇರೆ ಪಕ್ಷಗಳು ಈ ಕೃತ್ಯವನ್ನು ಖಂಡಿಸಿವೆ. ರಾಜ್ಯದಲ್ಲಿ ಬಿಜೆಪಿ ನಾಯಕ ಸಿಟಿ ರವಿ ಕೂಡಾ ಖಂಡಿಸಿದ್ದಾರೆ. “ಕೆಟ್ಟ ಸಂಗತಿಗಳು ಸಮಾಜದ ಮೇಲೆ ಪರಿಣಾಮ ಬೀರಲ್ಲ ಎಂದರೆ ಸಮಾಜ ಸಂವೇದನೆ ಕಳೆದುಕೊಂಡಂತೆ. ಒಳ್ಳೆಯ ಸಂಗತಿಗಳು ಹೇಗೆ ಸಮಾಜದ ಮೇಲೆ ಪರಿಣಾಮ ಬೀರುತ್ತವೆಯೋ ಅಷ್ಟೇ ಕೆಟ್ಟ ಸಂಗತಿಗಳು ಕೂಡ ಪರಿಣಾಮ ಬೀರುತ್ತವೆ” ಎಂದು ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಪ್ರಜ್ವಲ್ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಮಾಡಿರುವ ಸರ್ಕಾರದ ಕ್ರಮವನ್ನು ಶ್ಲಾಘಿಸಿ “ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. ಆರೋಪಿಯ ರಕ್ಷಣೆ ಮಾಡಲ್ಲ ಎಂದಿದ್ದಾರೆ. “ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಿದರೂ ಸ್ವಾಗತಿಸುತ್ತೇವೆ, ಸತ್ಯ ಹೊರಬರಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ” ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದ್ದಾರೆ. ಈ ಮಧ್ಯೆ ಇಂದು(ಏ.೨೯) ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಂಸದ ಪ್ರಜ್ವಲ್‌ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಈ ಮಧ್ಯೆ ಪ್ರಕರಣ ಸಂಬಂಧ ಎಫ್‌ಐಆರ್ ಆದ ದಿನವೇ ಪ್ರಧಾನಿ ಮೋದಿ ಅವರು ಎರಡನೇ ಸುತ್ತಿನ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಿದ್ದರು. ಆದರೆ ಪ್ರಜ್ವಲ್ ಪ್ರಕರಣದ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಅವರು ಮೈತ್ರಿ ಅಭ್ಯರ್ಥಿಯಾಗಿರುವ ಕಾರಣ ಪ್ರಜ್ವಲ್ ರೇವಣ್ಣ ಪರವೂ ಮತಯಾಚನೆ ಮಾಡಿದ್ದರು. ವೇದಿಕೆಯಲ್ಲಿ ಪ್ರಜ್ವಲ್ ಕೂಡಾ ಕಾಣಿಸಿಕೊಂಡಿದ್ದರು. ಆದರೆ ಇದೀಗ ತಮ್ಮ ಅಭ್ಯರ್ಥಿಯ ಕೃತ್ಯವನ್ನು ಖಂಡಿಸುವುದಾಗಲಿ, ತನಿಖೆಗೆ ಒತ್ತಾಯಿಸುವುದಾಗಲಿ ಮಾಡಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಎಸ್‌ಐಟಿ ರಚನೆಯಾದ ನಂತರ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಈ ಪ್ರಕರಣದ ಬಗ್ಗೆ ಟಿಎಂಸಿಯ ನಾಯಕಿ ಸಾಗರಿಕಾ ಘೋಷ್, ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲಕಾ ಲಂಬಾ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಮಹಿಳಾ ದೌರ್ಜನ್ಯದ ದಾಖಲೆ ಮುರಿದ ಪ್ರಜ್ವಲ್ ಮೋದಿಯವರ ಪರಿವಾರದ ಸದಸ್ಯ” ಎಂದು ಟೀಕಿಸಿದ್ದಾರೆ. ಜನಪರ ಚಳುವಳಿಗಳ ಒಕ್ಕೂಟ ‘ವಿಕೃತ ಕಾಮ ಪಿಶಾಚಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿʼ ಎಂದು ಒತ್ತಾಯಿಸಿವೆ.
ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಕೂಡಾ, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಒಂದು ವರ್ಷದ ಮೊದಲೇ ಈ ವಿಚಾರ ಗೊತ್ತಿದ್ದೂ ಮೈತ್ರಿ ಅಭ್ಯರ್ಥಿ ಮಾಡಲಾಗಿದೆ. ಪ್ರಧಾನಿ ಮೋದಿ ಆ ಆರೋಪಿಯ ಪರ ಮತಯಾಚನೆ ಮಾಡಿದ್ದರು. ಈಗ ಈ ಪ್ರಕರಣದ ಬಗ್ಗೆ ಮೋದಿ ಉತ್ತರಿಸಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಮೌನ ಮತ್ತು ಮುಸ್ಲಿಂ ಆರೋಪಿ ಇದ್ದಾಗ ಮಾತ್ರ ಖಂಡಿಸುವ ಪ್ರತಿಭಟಿಸುವ ದುಷ್ಟ ನಡೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ರಾಜ್ಯಕ್ಕೆ ಬರಲಿರುವ ಪ್ರಧಾನಿ ಮೋದಿ ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿಯವರಿಂದಲೇ ಮಾತನಾಡಿಸಿ ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
