ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೊನಾ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಅಸ್ಟ್ರಾಜೆನೆಕಾ ನ್ಯಾಯಾಲಯಗಳ ದಾಖಲೆಗಳ ಮೂಲಕ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ತಯಾರಕರು ಹೇಳುವಂತೆ ಕೋವಿಶೀಲ್ಡ್ ಲಸಿಕೆಯಿಂದಾಗಿ ಅಪರೂಪದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗಲು ಕಾರಣವಾಗಬಹುದು. ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಲಕ್ಷಣಕ್ಕೆ ಕಾರಣವಾಗಬಹುದು.
ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ. ಇದನ್ನು ಭಾರತ ಮತ್ತು ಇತರೆ ದೇಶಗಳಲ್ಲಿ ಜನರಿಗೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಮೋದಿಯ ಮೂರು ಸುಳ್ಳುಗಳು | ಮಣಿಪುರ, ಚೀನಾ ಅತಿಕ್ರಮಣ ಮತ್ತು ಕೋವಿಡ್‌ನಿಂದ ಬಚಾವು- ಇದು ಜನದ್ರೋಹವಲ್ಲವೇ?
ಇನ್ನು ಅಸ್ಟ್ರಾಜೆನೆಕಾ ಯುಕೆಯಲ್ಲಿ ಮೊಕದ್ದಮೆಯನ್ನು ಎದುರಿಸುತ್ತಿದೆ. ಅಸ್ಟ್ರಾಜೆನೆಕಾದ ಈ ಲಸಿಕೆಯು ಸಾವಿಗೆ ಮತ್ತು ಮಿದುಳಿಗೆ ತೀವ್ರವಾದ ಹಾನಿಯಾಗಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಲಸಿಕೆಯಿಂದಾಗಿ 51 ಪ್ರಕರಣಗಳಲ್ಲಿ 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟವಾಗಿದೆ ಎಂದು ಯುಕೆ ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಲಸಿಕೆ “ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು” ಎಂದು ಆಸ್ಟ್ರಾಜೆನೆಕಾ ಒಪ್ಪಿಕೊಂಡಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಕೋವಿಡ್ ವೇಳೆ ಬಿಜೆಪಿಗೆ ₹52 ಕೋಟಿ ನೀಡಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲ: ವರದಿ
ಈ ಬಗ್ಗೆ ಮೊದಲ ಬಾರಿಗೆ 2023ರಲ್ಲಿ ಆರೋಪ ಕೇಳಿ ಬಂದಿದ್ದು ಜೇಮೀ ಸ್ಕಾಟ್ ಎಂಬವರು ಆರೋಪಿಸಿದ್ದರು. ಏಪ್ರಿಲ್ 2021ರಲ್ಲಿ ವ್ಯಾಕ್ಸಿನೇಷನ್ ನಂತರದ ಶಾಶ್ವತ ಮಿದುಳಿನ ಗಾಯ ಉಂಟಾಗಿದೆ ಎಂದು ಆರೋಪಿಸಿದ್ದರು. ಮೇ 2023ರಲ್ಲಿ ಸ್ಕಾಟ್ ಅವರ ವಕೀಲರಿಗೆ ಪ್ರತಿಕ್ರಿಯೆಯನ್ನು ನೀಡಿದ್ದ ಅಸ್ಟ್ರಾಜೆನೆಕಾ ಟಿಟಿಎಸ್ ಮತ್ತು ಲಸಿಕೆಗೆ ಯಾವುದೇ ನೇರ ಸಂಪರ್ಕ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಅಡ್ಡಪರಿಣಾಮದ ಬಗ್ಗೆ ಸಂಸ್ಥೆ ಒಪ್ಪಿಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಲಸಿಕೆಯನ್ನು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ನೀಡುವುದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.