ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದಾರೆ.
ಉತ್ತರ ಪ್ರದೇಶದ ಬಹುತೇಕ ಸೀಟುಗಳಲ್ಲಿ ಮಾಯಾವತಿ ಅವರ ಜಾಟವ ಮೂಲ ಮತಭಂಡಾರ ಈವರೆಗೆ ದೊಡ್ಡ ಪ್ರಮಾಣದಲ್ಲಿ ಚೆದುರಿಲ್ಲ. ಆದರೆ ಈ ಚುನಾವಣೆಯಲ್ಲಿ ಆನೆ ಗುರುತು ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲದೆ ಹೋದರೆ ಮಾಯಾವತಿ ಅವರ ಕಷ್ಟ ಇನ್ನಷ್ಟು ಹೆಚ್ಚಲಿದೆ. ಮಾಡು ಇಲ್ಲವೇ ಮಡಿ ಹೋರಾಟ ಅವರ ಮುಂದಿದೆ.
2019ರಲ್ಲಿ ಸಮಾಜವಾದಿ ಪಾರ್ಟಿಯೊಂದಿಗೆ ಗೆಳೆತನ ಬೆಳೆಸಿದ್ದ ಬಿ.ಎಸ್.ಪಿ. 10 ಸೀಟುಗಳನ್ನು ಗೆದ್ದುಕೊಂಡಿತ್ತು. 27 ಸೀಟುಗಳಲ್ಲಿ ಎರಡನೆಯ ಸ್ಥಾನದಲ್ಲಿತ್ತು. ಶ್ರಾವಸ್ತಿ ಮತ್ತು ಸಹಾರಣಪುರ ಬಿಟ್ಟರೆ ಉಳಿದ ಎಂಟು ಕ್ಷೇತ್ರಗಳಲ್ಲಿ ಬಿ.ಎಸ್.ಪಿ.ಗೆಲುವಿನ ಅಂತರ ಲಕ್ಷ, ಎರಡು ಲಕ್ಷಕ್ಕೂ ಮತಗಳನ್ನು ದಾಟಿತ್ತು. ಆದರೆ ಅವರ ಒಟ್ಟು ಮತಗಳಿಕೆಯ ಪ್ರಮಾಣ ಶೇ.19.26ಕ್ಕೆ ಕುಸಿದಿತ್ತು. ನಂತರ 2022ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳಲ್ಲಿ ಈ ಮತಗಳಿಕೆಯ ಪ್ರಮಾಣ ಮತ್ತಷ್ಟು ಇಳಿದು ಶೇ.12ಕ್ಕೆ ಕುಸಿದಿತ್ತು. ಕಳೆದ ಸಲ ಗಳಿಸಿದ್ದ 10 ಸೀಟುಗಳನ್ನೂ ಈ ಸಲದ ಲೋಕಸಭಾ ಚುನಾವಣೆಗಳಲ್ಲಿಉಳಿಸಿಕೊಳ್ಳುವುದು ಕಷ್ಟಸಾಧ್ಯ.
ಸೀಟುಗಳ ಲೆಕ್ಕಾಚಾರದಲ್ಲಿ ಹೇಳುವುದೇ ಆದರೆ ಎಸ್.ಪಿ. ಮತ್ತು ಬಿ.ಎಸ್.ಪಿ.ಯ ಮೈತ್ರಿಕೂಟದ ಗರಿಷ್ಠ ಲಾಭ ಬಿ.ಎಸ್.ಪಿ.ಗೇ ದೊರೆತಿತ್ತು. ಸಮಾಜವಾದಿ ಪಾರ್ಟಿಗೆ ಶೇ. 17.96 ರಷ್ಟ ಮತಗಳು ಬಿದ್ದಿದ್ದವು. ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಎಸ್.ಪಿ. ಮತಗಳಿಕೆ ಶೇ.32ಕ್ಕೆ ಜಿಗಿದಿತ್ತು. ಲೋಕಸಭಾ ಚುನಾವಣೆಯಲ್ಲಿ ಶೇ 50ರಷ್ಟು ಮತ ಗಳಿಸಿದ್ದ ಬಿಜೆಪಿಯ ಮತಗಳು ವಿಧಾನಸಭಾ ಚುನಾವಣೆಯಲ್ಲಿ ಶೇ.8ರಷ್ಟು ಕುಸಿದಿದ್ದವು.
ಉತ್ತರಪ್ರದೇಶ ಮತ್ತು ಬಿಹಾರ ಲೋಕಸಭೆಗೆ ಚುನಾಯಿಸಿ ಕಳಿಸುವ ಒಟ್ಟು ಪ್ರತಿನಿಧಿಗಳ ಸಂಖ್ಯೆ 120. ನೆರೆಹೊರೆಯ ಈ ಎರಡು ರಾಜ್ಯಗಳಲ್ಲಿ ಘನವಾಗಿ ಗೆದ್ದ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಹೆಚ್ಚು ಕಠಿಣವೇನೂ ಅಲ್ಲ.
ಇತ್ತೀಚಿನ ವರ್ಷಗಳಲ್ಲಿ ಬಿ.ಎಸ್.ಪಿ.ಯ ಕೈಕಾಲುಗಳನ್ನು ಹಲವು ಬಗೆಗಳಲ್ಲಿ ಕಟ್ಟಿ ಹಾಕಲಾಗಿರುವ ಗುಮಾನಿಯೂ ಇದೆ. ಕಳೆದ ಐದು ವರ್ಷಗಳಲ್ಲಿ ಅವರು ಮೌನಕ್ಕೇ ಹೆಚ್ಚು ಶರಣಾಗಿರುವಂತಿದೆ. ಅವರ ರಾಜಕೀಯ ವರ್ಚಸ್ಸು ಕೂಡ ತಗ್ಗಿದೆ. ಈ ಹಿನ್ನೆಲೆಯಲ್ಲಿ ಎನ್.ಡಿ.ಎ. ಜೊತೆಗಾಗಲಿ ಅಥವಾ ಇಂಡಿಯಾ ಒಕ್ಕೂಟದ ಸಂಗಡವಾಗಲಿ ಹೆಚ್ಚು ಸೀಟುಗಳಿಗೆ ಚೌಕಾಶಿ ಮಾಡುವುದು ಸಾಧ್ಯವಿಲ್ಲ. ಜೊತೆಗೆ ಮೈತ್ರಿಕೂಟ ಸೇರಿದರೆ ಬಿ.ಎಸ್.ಪಿ.ಯ ಮೂಲ ಮತದಾರರು ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತನೀಡಿ ಒಂದು ವೇಳೆ ತಮ್ಮ ಮೂಲನಿಷ್ಠೆಯನ್ನೇ ಕದಲಿಸಿ ದೂರವಾದರೆ?

ಬಿ.ಎಸ್.ಪಿ.ಯ ಸಂಸ್ಥಾಪಕ ಕಾನ್ಷೀರಾಮ್ ಅವರು 1982ರಲ್ಲಿ ‘ಚಮಚಾ ಯುಗ’ ಎಂಬ ಪುಟ್ಟ ಪುಸ್ತಕ ಬರೆದಿದ್ದರು. ಜಗಜೀವನ ರಾಮ್, ರಾಮವಿಲಾಸ್ ಪಾಸ್ವಾನ್ ಹಾಗೂ ರಾಮದಾಸ ಅಠಾವಳೆ ಅವರಂತಹ ದಲಿತ ನೇತಾರರನ್ನು ಚಮಚಾಗಳೆಂದು ಬಣ್ಣಿಸಿದ್ದರು. ದಲಿತರು ಇತರೆ ರಾಜಕೀಯ ಪಕ್ಷಗಳೊಂದಿಗೆ ಕೈ ಜೋಡಿಸಿ ತಮ್ಮ ವಿಚಾರಧಾರೆಯ ಕುರಿತು ರಾಜೀ ಮಾಡಿಕೊಳ್ಳುವುದರ ಬದಲು ತಮ್ಮ ಸಾಮಾಜಿಕ ವಿಕಾಸಕ್ಕಾಗಿ ತಾವೇ ರಾಜಕಾರಣದಲ್ಲಿ ತೊಡಗುವುದು ಲೇಸು ಎಂದಿದ್ದರು. ಮೊದಲ ಚುನಾವಣೆಯನ್ನು ಸೋಲುವುದಕ್ಕಾಗಿ, ಎರಡನೆಯ ಚುನಾವಣೆಯನ್ನು ಸೋಲಿಸುವುದಕ್ಕಾಗಿ ಹಾಗೂ ಮೂರನೆಯ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಸ್ಪರ್ಧಿಸಬೇಕೆಂಬ ಮಾತನ್ನೂ ಅವರು ಬಿ.ಎಸ್.ಪಿ.ಯ ಧ್ಯೇಯವಾಕ್ಯಗಳಲ್ಲಿ ಒಂದನ್ನಾಗಿ ಹೇಳಿದ್ದುಂಟು.
ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದಾರೆ.
‘ತಿಲಕ್ ತರಾಜೂ ಔರ್ ತಲ್ವಾರ್- ಇನ್ ಕೋ ಮಾರೋ ಜೂತೇ ಚಾರ್’ ಎಂಬುದು ಕಾನ್ಷೀರಾಮ್ ಅವರ ಮತ್ತೊಂದು ಧ್ಯೇಯವಾಕ್ಯವಾಗಿತ್ತು. ಆನೆ ಚುನಾವಣಾ ಚಿಹ್ನೆಯು ಬಲಿಷ್ಠ ಜಾತಿಗಳನ್ನು ತಿರಸ್ಕರಿಸಿ ತನ್ನ ದಾರಿಯನ್ನು ತಾನೇ ನಿರ್ಮಿಸಿಕೊಳ್ಳಬೇಕೆಂಬುದು ಇದರ ಅರ್ಥಸಾರ ಆಗಿತ್ತು. ಆರಂಭದಲ್ಲಿ ದಲಿತ ಮತಗಳೇ ಈ ಪಕ್ಷದ ಮೂಲಾಧಾರ ಆಗಿದ್ದವು. ಆನಂತರ ಇತರೆ ಯಾದವೇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳನ್ನು ಸೆಳೆಯಿತು. ಕಾಲ ಸರಿದಂತೆ ಮಾಯಾವತಿಯವರು ಈ ತತ್ವದಿಂದ ಮುಂದೆ ಬಂದು ‘ಹಾಥೀ ನಹೀ ಗಣೇಶ್ ಹೈ, ಬ್ರಹ್ಮ ವಿಷ್ಣು ಮಹೇಶ್ ಹೈ’ ಎಂಬ ಘೋಷಣೆಯೊಂದಿಗೆ ಬ್ರಾಹ್ಮಣರು, ರಜಪೂತರು, ವೈಶ್ಯರನ್ನೂ ಬಿ.ಎಸ್.ಪಿ.ಯ ಜೊತೆಗೆ ಕರೆದುಕೊಂಡರು. ಶೇ.37ರಷ್ಟು ಮತಗಳಿಕೆಯ ಬಹುಮತ ಗಳಿಸಿ ಮೊದಲ ಸಲ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರವಾಗಿ ಮುಖ್ಯಮಂತ್ರಿಯೂ ಆದರು. ‘ಬಹುಜನ ಹಿತಾಯ ಬಹುಜನ ಸುಖಾಯ’ಎಂಬ ಸಂದೇಶ ನೀಡಿದರು.
ಆನಂತರದ ಅವರ ಚುನಾವಣಾ ಹಾದಿ ಕುಸಿತಗಳನ್ನೇ ಕಾಣುತ್ತ ಹೋಯಿತು. ಹೀಗಾಗಿಯೇ ಅವರು ಮೂಲತತ್ವಕ್ಕೆ ಹಿಂದಿರುಗಿದಂತಿದೆ. ಕಾನ್ಷೀರಾಮ್ ಅವರು ಹೇಳಿದ್ದಂತೆ ಗೆಲ್ಲುವುದಷ್ಟೇ ಅಲ್ಲ ಸೋಲಿಸುವ ಸಾಮರ್ಥ್ಯವನ್ನೂ ಗಳಿಸಿಕೊಳ್ಳಬೇಕು. ಮೂಲ ಮತಭಂಡಾರದ ತಳಪಾಯ ಉಳಿಸಿಕೊಳ್ಳಬೇಕು. ಆಗ ಮಾತ್ರ ರಾಜಕೀಯ ಪಕ್ಷವೊಂದರ ಚೌಕಾಶಿ ಶಕ್ತಿ ಸಾಮರ್ಥ್ಯ ಬಲಿಯುತ್ತದೆ. ಈ ಕಾರಣಗಳಿಗಾಗಿ ಮಾಯಾವತಿ ಅವರು ಮೈತ್ರಿ ಮಾಡಿಕೊಳ್ಳದಿರುವುದು ಹೆಚ್ಚು ವಾಸ್ತವ ಮತ್ತು ವಿವೇಕದ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಈ ನಡೆ ಬಿ.ಎಸ್.ಪಿ.ಯ ಪಾಲಿಗೆ ಒಳಿತು ಉಂಟು ಮಾಡುವ ಸಾಧ್ಯತೆಯಿದ್ದರೂ, ಬಿಜೆಪಿಯ ಹಾದಿಯನ್ನು ಹೆಚ್ಚು ಸಲೀಸು ಮಾಡಿಕೊಟ್ಟಿದೆ. ಸ್ಪರ್ಧೆ ತ್ರಿಕೋಣವಾಗಿ ಬದಲಾಗಿದೆ. ಕಳೆದ ಸಲ ಗಳಿಸಿದ್ದಕ್ಕಿಂತ ಕಡಿಮೆ ವೋಟು ಗಳಿಸಿದರೂ ಬಿಜೆಪಿಯ ಅಭ್ಯರ್ಥಿ ಗೆಲ್ಲುವುದು ಸುಲಲಿತ.
ಪಶ್ಚಿಮೀ ಉತ್ತರಪ್ರದೇಶದಲ್ಲಿ ಜಾಟ್ (ಒಕ್ಕಲಿಗ) ಜನಾಂಗದ ಮತಗಳು ಈ ಹಿಂದಿನಂತೆ ಸಾರಾಸಗಟಾಗಿ ಬಿಜೆಪಿಗೆ ಬೀಳುತ್ತಿಲ್ಲ. ಬಿಜೆಪಿಯ ಜಾಟ್ ಮತ ಭಂಡಾರದಲ್ಲಿ ಬಿರುಕು ಕಂಡಿದ್ದಾರೆ ರಾಜಕೀಯ ವೀಕ್ಷಕರು. ಜಾಟವೇತರ (ಜಾಟವ ಎಂಬುದು ಚಮ್ಮಾರ ಜಾತಿಯ ಒಂದು ಉಪಪಂಗಡ) ದಲಿತ ಮತಗಳಲ್ಲಿ ಒಂದಷ್ಟು ಪ್ರಮಾಣ ಪುನಃ ಬಿ.ಎಸ್.ಪಿ.ಕಡೆ ಸರಿಯುತ್ತಿವೆ. ಈಗಾಗಲೆ ಕೆಲವೆಡೆ ಜಾಟವರು ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ನೀಡುವ ಮಾತುಗಳನ್ನು ಆಡತೊಡಗಿದ್ದಾರೆ. ಬುಲಂದಶಹರ ಕ್ಷೇತ್ರ ಈ ಮಾತಿಗೊಂದು ಉದಾಹರಣೆ. ‘ನಾಲ್ಕು ನೂರು ಸೀಟು ಗೆದ್ದು ಸಂವಿಧಾನ ಬದಲಿಸಲು ಹೊರಟಿದೆ ಬಿಜೆಪಿ’ ಎಂಬ ಕಥಾನಕ ಬಿ.ಎಸ್.ಪಿ.ಬೆಂಬಲಿಗರ ನಡುವೆ ಹರಡಿದೆ. ಹೀಗಾಗಿ 2014 ಮತ್ತು 2019ರಲ್ಲಿ ಬಿಜೆಪಿಗೆ ಮತ ನೀಡಿದ್ದವರು ಈ ಸಲ ಬಿಜೆಪಿಯಿಂದ ದೂರ ಸರಿದಿದ್ದಾರೆ.
ಚರಣಸಿಂಗ್ ಅವರು ಸ್ಥಾಪಿಸಿದ್ದ ರಾಷ್ಟ್ರೀಯ ಲೋಕದಳ ಈ ಸಲ ಬಿಜೆಪಿಯೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಂಡಿದೆ. ಈ ಪಕ್ಷದಲ್ಲಿ ಜಾಟರದೇ ಪ್ರಾಬಲ್ಯ. ಜಾಟರು ದಲಿತರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬಂದಿರುವ ಜನಾಂಗ. ಈ ಕಾರಣಕ್ಕಾಗಿಯೂ ಜಾಟವರು ಮತ್ತು ಜಾಟವೇತರ ದಲಿತರು ಅಲ್ಲಲ್ಲಿ ಬಿಜೆಪಿಯಿಂದ ದೂರಾಗಿದ್ದಾರೆ. ಹಾಗೆಯೇ ಯಾದವ ಪ್ರಾಬಲ್ಯದ ಸಮಾಜವಾದಿ ಪಾರ್ಟಿಯಲ್ಲೂ ಜಾಟವರಿಗೆ ವಿಶ್ವಾಸವಿಲ್ಲ. ಮಾಯಾವತಿ ಇಂಡಿಯಾ ಮೈತ್ರಿ ಕೂಟ ಅಥವಾ ಎನ್.ಡಿ.ಎ. ಮೈತ್ರಿಕೂಟ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅನೇಕ ಸೀಟುಗಳಲ್ಲಿನ ಸ್ಪರ್ಧೆಯು ತ್ರಿಕೋಣ ಸ್ವರೂಪಕ್ಕೆ ತಿರುಗಿದೆ. ಅರ್ಥಾತ್ ಇಂಡಿಯಾ ಮತ್ತು ಎನ್.ಡಿ.ಎ.ಮೈತ್ರಿಕೂಟಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಬಿ.ಎಸ್.ಪಿ.ಉದಾಹರಣೆಗೆ ಗೌತಮಬುದ್ಧ ನಗರ ಕ್ಷೇತ್ರದ ಬಹುತೇಕ ಜಾಟವರು ಈ ಸಲ, ಪ್ರಾಯಶಃ ಕಡೆಯ ಸಲ ಮಾಯಾವತಿಯವರ ಜೊತೆ ನಿಲ್ಲುವ ಇರಾದೆ ಪ್ರಕಟಿಸಿದ್ದಾರೆ. ಈ ಚುನಾವಣೆಯಲ್ಲಿ ಮಾಯಾವತಿಯವರು ಹೆಚ್ಚು ಸೀಟುಗಳನ್ನು ಗೆಲ್ಲದೆ ಹೋದರೆ ಮುಂದಿನ ಚುನಾವಣೆಯಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಅವರನ್ನು ಬೆಂಬಲಿಸಬೇಕಾಗುತ್ತದೆ ಎನ್ನುತ್ತಾರೆ ರಾಮಗಢ ಗ್ರಾಮದ ಬ್ರಹ್ಮ ಪ್ರಧಾನ್. ಇಲ್ಲಿನ ಬಿ.ಎಸ್.ಪಿ. ಅಭ್ಯರ್ಥಿ ರಾಜೇಂದ್ರಸಿಂಗ್ ಸೋಲಂಕಿ ರಜಪೂತ ಕುಲದವರು. ಉತ್ತರಪ್ರದೇಶ ಮತ್ತು ಗುಜರಾತಿನಲ್ಲಿ ರಜಪೂತ ಕುಲ ಹಲವು ಕಾರಣಗಳಿಗಾಗಿ ಬಿಜೆಪಿಯ ವಿರುದ್ಧ ಸಿಡಿದು ನಿಂತಿದೆ. ಅವರ ಮತಗಳು ಬಿ.ಎಸ್.ಪಿ.ಯತ್ತ ಕೂಡ ಹಂಚಿಕೆಯಾಗುವ ದಟ್ಟ ನಿರೀಕ್ಷೆಯಿದೆ.
