ವಿಡಂಬನೆ | ಪ್ರಜ್ವಲ್ ರೇವಣ್ಣನ್ನ ಜರ್ಮನಿಗೇ ಯಾಕೆ ಕಳ್ಸುದ್ರು? ಯಾರ್ ಕಳ್ಸುದ್ರು?

Date:

ಜರ್ನಲಿಸ್ಟ್ ಜಂಗ್ಲಿ ‘ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ಯಾಕೆ’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯ ಬೆನ್ನು ಹತ್ತಿದ್ದ. ಗಳಿಗೆಗೊಂದು ಗುಟ್ಕಾ ಪಾಕಿಟ್ ಹರಿದು ಬಾಯಿಗೆ ತುಂಬ್ತಿದ್ದ. ತಲೆ ಬಿಸಿ ಮಾಡ್ಕೊಂಡು ತಿರುಗಾಡ್ತಿದ್ದ. ಕೊನೆಗೊಂದು ಶಾರ್ಟ್ ಲಿಸ್ಟ್ ಮಾಡ್ಕೊಂಡು, ಒಂದೊಂದಾಗಿ ಹುಡುಕ್ಕೊಂಡ್ ಹೋದ.

ಮೊದಲಿಗೆ, ದೊಡ್ಡಗೌಡರ ಮನೆ ಸುತ್ತ ಪ್ರದಕ್ಷಿಣೆ ಹಾಕಿದ. ನಿಂಬೆಹಣ್ಣು, ಕುಂಕುಮ, ಬಾಳೆಹಣ್ಣಿನ ಸಿಪ್ಪೆ ಸಿಕ್ತು. ಸಿಟ್ಟಾದ್ರು ತೋರಿಸಿಕೊಳ್ಳದ ಜಂಗ್ಲಿ ಸಣ್ಣಗೌಡರ ಮನೆ ಕಡೆ ಹೋದ. ಯಾವಾಗಲೂ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಗೇಟ್‌ನಲ್ಲಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್, ‘ಬಾಯ್ಬುಡ್ಬೇಡ ಅಂದವ್ರೆ’ ಎಂದ. ಪಾಪದವನ ಹೊಟ್ಟೆ ಮೇಲೆ ಹೊಡೆಯೋದ್ಯಾಕೆ ಎಂದು ಅಲ್ಲಿಂದ ಕಾಲು ಕಿತ್ತ ಜಂಗ್ಲಿ.

ತಲೆಯಲ್ಲಿ ಕನಕಪುರ ತೇಲಿ ಹೋಯಿತು. ಗಾಡೀನ ಸದಾಶಿವನಗರದ ಕಡೆಗೆ ತಿರುಗಿಸಿದ. ಪೆಟ್ರೋಲ್ ಬೇರೆ ಕಡಿಮೆ ಇದೆ, ಜೇಬಲ್ಲಿ ಪಾಕಿಟ್‌ಗಳು ಖಾಲಿಯಾಗ್ತಿವೆ, ಅದರೂ ಎದೆಗುಂದಲಿಲ್ಲ ಜಂಗ್ಲಿ. ಕನಕಪುರದ ಕಲಿಗಳ ಬಗ್ಗೆ ಏನೋ ಭರವಸೆ, ಉತ್ತರ ಪಡೆಯಲೇಬೇಕೆಂಬ ಛಲ, ಹೋದ. ಆದರೆ ಅಲ್ಲೂ ಉತ್ತರ ಸಿಗಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೊನೆಗೆ, ‘ಯಾರೇನು ಹೇಳದು, ನಮ್ಮ ಮೀಡಿಯಾದವರಿಗೆ ಗೊತ್ತಿಲ್ದೆ ಇರೋದು ಏನೈತೆ’ ಎಂದು, ತನ್ನ ಹಳೇ ಗೆಳೆಯರನ್ನು ಎಡತಾಕಿದ. ಅವರು, ‘ಲೇಯ್, ಪ್ರಜ್ವಲ್ ನಮ್ಮೋನಲ್ವೇನೋ, ಅವನ ವಿರುದ್ಧ ನಾವ್ ಮಾಡಕಾಯ್ತದೇನೋ, ನೋಡು ಪೆನ್ ಡ್ರೈವ್ ಎಲ್ಲ ಇಲ್ಲೇ ಅವೆ’ ಎಂದು ಜೇಬಿಗೆ ಕೈ ಹಾಕಿದರು. ಜಂಗ್ಲಿಗೆ ಕೊಂಚ ಕಸಿವಿಸಿಯಾಗಿ, ‘ನಾನ್ ರಾಂಗ್ ರೂಟ್‌ನಲ್ಲಿದ್ದೀನಾ’ ಎಂದು ತನಗೆ ತಾನೇ ಪ್ರಶ್ನಿಸಿಕೊಂಡ. ‘ಇಲ್ಲ, ಇವರ್‍ನೆಲ್ಲ ಹಿಂದಾಕಿ, ಸ್ಕೂಪ್ ಸ್ಟೋರಿ ಹೊಡಿಲೇಬೇಕು’ ಎಂದು ಅವರನ್ನು ಹಿಂದಾಕಿ ಮುಂದೋದ.

ತಕ್ಷಣ ರಾಜಗುರು ದ್ವಾರಕಾನಾಥ್ ಗುರೂಜಿ ನೆನಪಾದರು. ಗುರೂಜಿಯತ್ರ ಭಾರೀ ಜನ.

‘ಅಪಾಯಿಂಟ್ಮೆಂಟ್ ಇದೆಯಾ’ ಎಂದ ರಿಸಪ್ಷನಿಸ್ಟ್.

‘ಜಂಗ್ಲಿ ಅಂತೇಳು’ ಎಂದು ಸ್ಟೈಲಾಗಿ ನಿಂತ.

‘ಸಾರ್… ಒಳಗೋಗಿ’ ಎಂದ ರಿಸಪ್ಷನಿಸ್ಟ್.

‘ಬಾ ಜಂಗ್ಲಿ, ಭಾರೀ ದಿನಗಳಾಯ್ತು, ಇತ್ತ ಕಡೆ ಬರದೇ…’ ಎಂದು ವಿಚಾರಿಸಿದರು ಗುರೂಜಿ.

‘ಗುರೂಜಿ, ಸಮಸ್ಯೆ ಆಗೈತೆ’ ಎಂದ ಜಂಗ್ಲಿ.

‘ಇಲ್ಲಿಗ್ ಬರೋರೆಲ್ಲ ಸಮಸ್ಯೆ ಹೊತ್ಕೊಂಡೆ ಬರೋದು. ಅದರಲ್ಲೇನು ವಿಶೇಷ. ನಿಮ್ ಡಿಸಿಎಂ ನನ್ ಮಾತಿಲ್ದೆ ಮೂರ್ ಹೆಜ್ಜೆ ಇಡಲ್ಲ, ಅದೆಂತ ಸಮಸ್ಯೆ ಹೇಳಯ್ಯ’ ಎಂದರು ಗುರೂಜಿ.

‘ಅದೇ ಗುರೂಜಿ, ಪ್ರಜ್ವಲ್ ರೇವಣ್ಣನ ಕೇಸು…’ ಎಂದ ಜಂಗ್ಲಿ.

‘ಅಯ್ಯೋ, ಅದ್ಕೆಲ್ಲ ನನ್ನತ್ರ ಬರಲ್ಲ ಅವ್ರು. ಕೇಸಾದ್ಮೇಲೆ ಬರ್ತರೆ’ ಎಂದರು.

‘ನಿಮ್ಮತ್ರ ಬಂದಿದ್ರಾ ಗುರೂಜಿ, ಎಲ್ಲಿದಾರೆ…?’ ಎಂದು ದಾವಂತಕ್ಕೆ ಬಿದ್ದ ಜಂಗ್ಲಿ.

‘ಸಮಾಧಾನ, ಇನ್ನೂ ಬಂದಿಲ್ಲ, ಬರ್ತರೆ… ಎಲ್ಲೋಗ್ತರೆ’ ಎಂದರು ಗುರೂಜಿ.

‘ನೀವೊಳ್ಳೆ… ಅವರ್ ಆಗ್ಲೇ ಹೋಗಾಗಿದೆ, ಜರ್ಮನಿಗೆ. ಅದ್ನ ಕೇಳಕ್ಕೆ ನಿಮ್ಮತ್ರ ಬಂದಿದ್ದು’ ಎಂದ ಜಂಗ್ಲಿ.

‘ನೀನೇ ಹೇಳ್ದಲ್ಲ ಜರ್ಮನಿಗೆ ಅಂತ… ಇನ್ನೇನು?’ ಎಂದರು ಗುರೂಜಿ.

‘ಅದೇ ಗುರೂಜಿ, ಪ್ರಜ್ವಲ್ ರೇವಣ್ಣ ಜರ್ಮನಿಗೇ ಯಾಕ್ ಹೋದ ಅಂತ?’ ಎಂದ ಜಂಗ್ಲಿ.

‘ಅಯ್ಯೋ ಮಂಕೆ, ಅಷ್ಟೂ ಗೊತ್ತಾಗ್ಲಿಲ್ವಾ ನಿಂಗೆ, ಜೆಡಿಎಸ್ ಈಗ ಯಾರ ಜೊತೆ ಮೈತ್ರಿ ಮಾಡ್ಕೊಂಡಿದೆ?’ ಎಂದು ಪ್ರಶ್ನೆ ಇಟ್ಟರು ಗುರೂಜಿ.

‘ಬಿಜೆಪಿ ಜೊತೆಗೆ’

‘ಬಿಜೆಪಿ ಮೂಲ ಯಾವ್ದು?’

‘ಆರೆಸ್ಸೆಸ್ಸು’

‘ಆರೆಸ್ಸೆಸ್ ಮೂಲ ಯಾವ್ದು?’

‘ಗೊತ್ತಾಯ್ತು ಗುರುಗಳೇ… ಆರೆಸ್ಸೆಸ್, ಫ್ಯಾಶಿಸ್ಟು, ನಾಜಿಯಿಸ್ಟ್, ಹಿಟ್ಲರ್, ಜರ್ಮನಿ… ಗೊತ್ತಾಯ್ತು, ಗುರುಗಳೇ ಎಂಥ ಗುರುಗಳು ನೀವು, ಎಲ್ಲಿಟ್ಟಿದ್ರಿ ಇದಾ?’ ಎಂದು ಅಡ್ಡಬಿದ್ದ ಜಂಗ್ಲಿ.

‘ಇನ್ನೇನು ಸಮಸ್ಯೆ’ ಎಂದು ಗುರುಗಳು ಕಣ್ಸನ್ನೆಯಲ್ಲಿಯೇ ಕೇಳಿದರು.

‘ಏನಿಲ್ಲ, ಜರ್ಮನಿಗೆ ಕಳ್ಸಿದ್ಯಾರು ಅಂತ ಕೇಳೋನಿದ್ದೆ, ಗೊತ್ತಾಯ್ತು ಬುಡಿ’ ಎಂದ ಜಂಗ್ಲಿ.

‘ಜರ್ಮನಿಗಿಂತ ಸೇಫ್ ಪ್ಲೇಸ್ ಇನ್ಯಾವುದಿದೆ, ಹಿಟ್ಲರ್ ಎಲ್ಲಿ ಬಚ್ಚಿಟ್ಕೊಂಡಿದ್ದು, ನೀವೆಲ್ಲ ಹ್ಯಂಗೋ ಜರ್ನಲಿಸ್ಟ್ ಆದ್ರಿ’ ಎಂದು ಜಂಗ್ಲಿಯತ್ತ ಸಿಟ್ಟಿನ ಉರಿಗಣ್ಣು ಬಿಟ್ಟರು.

ಅದಕ್ಕೂ ಮುಂಚೆಯೇ ಜರ್ನಲಿಸ್ಟ್ ಜಂಗ್ಲಿ ರಸ್ತೆಯಲ್ಲಿದ್ದ. ಗುರೂಜಿಯವರ ಉರಿಗಣ್ಣಿಗೆ ಬಿದ್ದು ಬೂದಿಯಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೈಂಗಿಕ ದೌರ್ಜನ್ಯ ಪ್ರಕರಣ | ಜುಲೈ 8ರವರೆಗೆ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ

ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೂನ್‌ 19ರಿಂದ ನಾಲ್ಕು...

ರೈತರೊಂದಿಗೆ ಉದ್ದಿಮೆದಾರರಿಂದ ನೇರ ಖರೀದಿ ವ್ಯವಸ್ಥೆಗೆ ಚಿಂತನೆ: ಸಚಿವ ಚಲುವರಾಯಸ್ವಾಮಿ

ಕೃಷಿ ನವೋದ್ಯಮಗಳ ಪ್ರೋತ್ಸಾಹ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಸದಾ ಸಿದ್ದವಿದೆ. ರೈತರೊಂದಿಗೆ...

ಕೇರಳದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಕೇಂದ್ರ ಕೃತಕವಾಗಿ ಸೃಷ್ಟಿಸಿದೆ: ವಿತ್ತ ಸಚಿವ ಆರೋಪ

ಕೇಂದ್ರವು ದೇಶದ ಒಕ್ಕೂಟ ರಚನೆಗೆ ವಿರುದ್ಧವಾದ ನಿಲುವನ್ನು ಅನುಸರಿಸುತ್ತಿದೆ ಮತ್ತು ಕೇರಳ...

ಸಂಸದರಾಗಿ ಮೋದಿ ಪ್ರಮಾಣ ವಚನ: ಸಂವಿಧಾನದ ಪ್ರತಿ ಪ್ರದರ್ಶಿಸಿ ನೆನಪಿಸಿದ ‘ಇಂಡಿಯಾ’ ಒಕ್ಕೂಟ

ನೂತನ ಸಂಸತ್‌ ಭವನ ಸೆಂಟ್ರಲ್ ವಿಸ್ಟಾದಲ್ಲಿ ಇಂದಿನಿಂದ(ಜೂನ್ 24) 18ನೇ ಲೋಕಸಭೆಯ...