- ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
- ಹೈವೋಲ್ಟೇಜ್ ಕ್ಷೇತ್ರವಾದ ಗಂಗಾವತಿ
ವಿಧಾನಸಭಾ ಚುನಾವಣೆ ನಿಂತು ಶಾಸಕರಾಗಬೇಕೆಂದು ಆಸೆ ಇಟ್ಟುಕೊಂಡಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಸಹಿಹಾಕದೇ ನಾಮಪತ್ರ ಸಲ್ಲಿಸಿರುವುದರಿಂದ ನಾಮಮತ್ರವು ತಿರಸ್ಕೃತಗೊಂಡಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ದೇವಪ್ಪ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಡೆದ ನಾಮಪತ್ರ ಪರಿಶೀಲನೆ ವೇಳೆಯಲ್ಲಿ ದೇವಪ್ಪ ಅವರು ನಾಮಪತ್ರಕ್ಕೆ ಸಹಿ ಹಾಕದೇ ಇರುವುದು ಕಂಡುಬಂದಿದ್ದು, ಚುನಾವಣಾ ಅಧಿಕಾರಿಗಳು ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ಬೆಂಗಳೂರು ಮೂಲದ ಗೀತಾ ಎಂಬ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಕೂಡ ತಾನಿರುವ ವಿಳಾಸದ ದೃಢೀಕರಣ ಪತ್ರ ಸಲ್ಲಿಸದ ಕಾರಣ ಅವರ ನಾಮಪತ್ರವನ್ನು ಕೂಡ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಶಿವಮೊಗ್ಗ | ಚೂರಿ ಇರಿದು ಯುವಕನ ಹತ್ಯೆ; ದುಷ್ಕರ್ಮಿಗಳ ಗುಂಪು ಪರಾರಿ
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸ್ಪರ್ಧಿಸುತ್ತಿರುವುದರಿಂದ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಇಲ್ಲಿ ಒಟ್ಟು 33 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರದಿಂದಾಗಿ 31 ನಾಮಪತ್ರ ಮಾತ್ರ ಉಳಿದುಕೊಂಡಿವೆ.
ಇದರಲ್ಲಿ ಒಬ್ಬರು ಮಹಿಳಾ ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ. 8 ಜನ ಪಕ್ಷೇತರರ ಹಾಗೂ ಉಳಿದ ಅಭ್ಯರ್ಥಿಗಳು ನಾನಾ ಪಕ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ.