ಹಲವಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿಬಂದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟನ್ನು ರದ್ದುಗೊಳಿಸಿ, ಕೂಡಲೇ ಅವರನ್ನು ವಿದೇಶದಿಂದ ಕರೆತರಲು ಶ್ರಮಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಂದು ಪತ್ರ ಬರೆದಿದ್ದಾರೆ.
#BREAKING NEWS #PrajwalRevanna Sex scandal : Karnataka CM @siddaramaiah Wrote Letter to Prime Minister @narendramodi
asks to to take swift action to cancel the Diplomatic Passport & swift return of the absconding Member of Parliament to face the full force of law.@zoo_bear pic.twitter.com/fXZgsfkRul
— Irshad Venur (@muhammadirshad6) May 1, 2024
ಇಂದು ಬರೆದಿರುವ ಪತ್ರದಲ್ಲಿ(ಮೇ 1) ಪ್ರಕರಣವನ್ನು ಉಲ್ಲೇಖಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸಲು ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ಮತ್ತು ಪೊಲೀಸ್ ವ್ಯವಸ್ಥೆಗಳ ನೆರವಿನಿಂದ ಹಾಗೂ ವಿದೇಶಾಂಗ ವ್ಯವಹಾರ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳ ಮೂಲಕ ಕೂಡಲೇ ಅವರನ್ನು ವಿದೇಶದಿಂದ ವಾಪಸ್ ಕರೆತರುವಂತೆ ಹಾಗೂ ಕಾನೂನು ಪ್ರಕಾರ ವಿಚಾರಣೆ ಎದುರಿಸಲು ಕರ್ನಾಟಕದ ಎಸ್‌ಐಟಿ ತಂಡಕ್ಕೆ ನೆರವಾಗುವಂತೆ ಪತ್ರದಲ್ಲಿ ಕೋರಿದ್ದಾರೆ. ಇದಕ್ಕೆ ಬೇಕಾದ ಸಂಪೂರ್ಣ ವಿವರಗಳನ್ನು ಕರ್ನಾಟಕದ ಎಸ್‌ಐಟಿಯ ಅಧಿಕಾರಿಗಳು ಒದಗಿಸಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, 2024ರ ಲೋಕಸಭೆ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹಾಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬ ಗಂಭೀರ ಪ್ರಕರಣದ ಬಗ್ಗೆ ನಿಮಗೆ ತಿಳಿದಿರಲೇಬೇಕು. ಪ್ರಜ್ವಲ್ ರೇವಣ್ಣ ಅವರು ಎದುರಿಸುತ್ತಿರುವ ಆರೋಪಗಳು ಭಯಾನಕ ಮತ್ತು ನಾಚಿಕೆಗೇಡಿತನದ್ದಾಗಿದ್ದು, ಇದು ದೇಶದ ಆತ್ಮಸಾಕ್ಷಿಯನ್ನೇ ಅಲ್ಲಾಡಿಸಿದೆ.
ಕರ್ನಾಟಕ ಸರ್ಕಾರವು ಏಪ್ರಿಲ್ 28ರಂದು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ತನಿಖೆಯನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿದೆ. ಹಲವಾರು ಮಹಿಳೆಯರ ವಿರುದ್ಧದ ಆಪಾದಿತ ಅಪರಾಧಗಳ ನೈಜ ಸ್ವರೂಪ ಹೊರಬಿದ್ದ ಕೂಡಲೇ ಸಂತ್ರಸ್ತರು ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಲು ಎಸ್‌ಐಟಿ ರಚನೆ ಮಾಡಲಾಗಿದ್ದು, ಏಪ್ರಿಲ್ 28ರಂದು ಎಫ್‌ಐಆರ್ ಕೂಡ ದಾಖಲಿಸಿಕೊಳ್ಳಲಾಗಿದೆ.
ಆದಾಗ್ಯೂ, ವರದಿಗಳ ಪ್ರಕಾರ ಪೊಲೀಸ್ ಪ್ರಕರಣ ಮತ್ತು ಬಂಧನವನ್ನು ಗ್ರಹಿಸಿದ್ದ ಆರೋಪಿ ಸಂಸದ ಮತ್ತು ಲೋಕಸಭೆಯ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಏಪ್ರಿಲ್ 27ರಂದು ದೇಶ ಬಿಟ್ಟು ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಮಾಡಿದ್ದಾರೆನ್ನಲಾದ ಅಪರಾಧಗಳ ಆರೋಪಗಳ ತನಿಖೆಗೆ ಎಸ್‌ಐಟಿ ಹಗಲಿರುಳು ಶ್ರಮಿಸುತ್ತಿರುವಾಗ, ಅವರನ್ನು ದೇಶಕ್ಕೆ ಮರಳಿ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಅವರು ದೇಶದ ಕಾನೂನಿನ ಪ್ರಕಾರ ತನಿಖೆ ಮತ್ತು ವಿಚಾರಣೆಯನ್ನು ಎದುರಿಸಬೇಕಿದೆ.
ಈ ನಿಟ್ಟಿನಲ್ಲಿ, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ಮತ್ತು ಪೊಲೀಸ್ ವ್ಯವಸ್ಥೆಗಳನ್ನು ಬಳಸಿಕೊಂಡು ಮತ್ತು ಇತರ ಕ್ರಮಗಳನ್ನು ಕೈಗೊಳ್ಳಲು ವಿದೇಶಾಂಗ ವ್ಯವಹಾರ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳನ್ನು ಒತ್ತಾಯಿಸಲು ಈ ಪತ್ರ ಬರೆಯಲಾಗಿದೆ. ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳ ನೆರವಿನಿಂದ ಕಾನೂನನ್ನು ಎದುರಿಸಲು ಪರಾರಿಯಾದ ಸಂಸತ್ ಸದಸ್ಯನನ್ನು ಶೀಘ್ರವೇ ವಾಪಸ್ ವಿದೇಶದಿಂದ ಕರೆತರಲು ಮನವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಎಸ್ಐಟಿ ಎಲ್ಲ ಅಗತ್ಯ ವಿವರಗಳನ್ನು ಒದಗಿಸುತ್ತದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
