ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ‘ದ್ವೇಷದ ಭಾಷಣ ಮಾಡುವ ಬದಲು ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಸರ್ಕಾರ ಮಾಡಿದ ಸಾಧನೆಯ ಬಗ್ಗೆ ಮತ ಕೇಳುವುದು ಉತ್ತಮ’ ಎಂದು ಮೋದಿಗೆ ತಾಕೀತು ಮಾಡಿದ್ದಾರೆ.
ಮೋದಿಗೆ ಬರೆದ ಪತ್ರವನ್ನು ಟ್ವೀಟ್ ಮಾಡಿರುವ ಖರ್ಗೆ, “ಚುನಾವಣಾ ಪ್ರಚಾರದಲ್ಲಿ ಮೋದಿ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ನೀವು ಮತದಾರರಿಗೆ ಏನು ಹೇಳಲು ಹೊರಟಿದ್ದೀರಿ ಎಂಬುದರ ಬಗ್ಗೆ ಎನ್ಡಿಎ ಅಭ್ಯರ್ಥಿಗಳಿಗೆ ನೀವು ಬರೆದಿರುವ ಪತ್ರವನ್ನು ಮಗನಿಸಿದ್ದೇನೆ. ನಿಮ್ಮ ಪತ್ರವು ನಿಮ್ಮಲ್ಲಿ ಸಾಕಷ್ಟು ಹತಾಶೆ ಮತ್ತು ಚಿಂತೆ ಇದೆ ಎಂಬುದನ್ನು ಸೂಚಿಸುತ್ತದೆ” ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಎಸ್ಸಿ, ಎಸ್ಟಿ ಮತ್ತು ಒಬಿಸಿಯಿಂದ ಮೀಸಲಾತಿಯನ್ನು ಕಿತ್ತು ‘ನಮ್ಮ ಮತಬ್ಯಾಂಕ್’ಗೆ ನೀಡಲಾಗುತ್ತದೆ ಎಂದು ನೀವು ಆರೋಪಿಸುತ್ತಿದ್ದೀರಿ. ನಮ್ಮ ಮತಬ್ಯಾಂಕ್ ಪ್ರತಿಯೊಬ್ಬ ಭಾರತೀಯ – ಬಡವರು, ಅಂಚಿನಲ್ಲಿರುವವರು, ಮಹಿಳೆಯರು, ಉದ್ಯೋಗಾಕಾಂಕ್ಷಿ ಯುವಜನರು, ಕಾರ್ಮಿಕ ವರ್ಗ, ದಲಿತರು – ನಮ್ಮ ಮತಬ್ಯಾಂಕ್. ಅಲ್ಲದೆ, 1947ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿದವರು ಆರ್ಎಸ್ಎಸ್ ಮತ್ತು ಬಿಜೆಪಿ ಎಂಬುದು ಎಲ್ಲರಿಗೂ ತಿಳಿದಿದೆ” ಎಂದು ಖರ್ಗೆ ಕಿಡಿಕಾರಿದ್ದಾರೆ.
“ನಿಮ್ಮ ಅಭ್ಯರ್ಥಿಗಳು ಕೂಡ ನಿಮ್ಮ ಸುಳ್ಳನ್ನು ಪದೇ ಪದೇ ಪುನರುಚ್ಚಾರ ಮಾಡಬೇಕೆಂದು ನೀವು ಬಯಸುತ್ತೀರಿ. ಸುಳ್ಳನ್ನು ಸಾವಿರ ಬಾರಿ ಮತ್ತೆ ಮತ್ತೆ ಹೇಳುವುದರಿಂದ ಅದು ಸತ್ಯವಾಗುವುದಿಲ್ಲ” ಎಂದು ಖರ್ಗೆ ಹೇಳಿದ್ದಾರೆ.
“ಮತದಾರರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ ಮತ್ತು ಯಾವ ಭರವಸೆಗಳಿವೆ ಎಂಬುದನ್ನು ಸ್ವತಃ ಓದುವ ಮತ್ತು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದಾರೆ. ನಮ್ಮ ಪ್ರಣಾಳಿಕೆಯು ನ್ಯಾಯ ಮತ್ತು ಸಮಾಜದ ಎಲ್ಲ ವರ್ಗದ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ” ಎಂದು ಹೇಳಿದ್ದಾರೆ.