ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 70ದಶಕ ಕಳೆದರೂ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳು, ಅಸ್ಪೃಶ್ಯತೆ ಕಡಿಮೆಯಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟೈರ್ ರಂಗನಾಥ್ ಆರೋಪಿಸಿದರು.
ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಶಿರಾ ನಗರಸಭಾ ಅಧ್ಯಕ್ಷರಾದ ಪೂಜಾ ಅವರ ಮೇಲೆ ಉದ್ದೇಶಪೂರ್ವಕವಾಗಿ ಕೆಲವರು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ದಲಿತ ಸಮುದಾಯದವರ ಮೇಲೆ ಹಲ್ಲೆ, ಆಸ್ತಿ ಕಬಳಿಕೆ, ದೌರ್ಜನ್ಯಗಳು ನಡೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ದಲಿತ ಜನಪ್ರತಿನಿಧಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಲೋಕಸಭಾ ಸದಸ್ಯರುಗಳ ಮೇಲಿನ ಜಾತಿ ದೌರ್ಜನ್ಯ ಮಾಡಿರುವುದು ನಮ್ಮ ಕಣ್ಣಮುಂದೆ ಇದೆ. ಇದರ ಮುಂದುವರಿದ ಭಾಗವಾಗಿ ಶಿರಾ ತಾಲೂಕಿನ ಚುನಾಯಿತ ದಲಿತ ಜನಪ್ರತಿನಿಧಿಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ರಾಜಕೀಯ ಷಡ್ಯಂತ್ರದಿಂದ ಹೆಚ್ಚಾಗುತ್ತಿದೆ ಎಂದರು.
ಇದಕ್ಕೆ ಉದಾಹರಣೆ ಎಂಬಂತೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಶಿರಾ ನಗರಸಭಾ ಅಧ್ಯಕ್ಷರಾದ ಪೂಜಾರವರ ಮೇಲೆ ಉದ್ದೇಶಪೂರ್ವಕವಾಗಿ ಕೆಲವರು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಹಿಂದೆಯೂ ಸಹ 1ನೇ ವಾರ್ಡಿನ ನಗರಸಭೆ ಸದಸ್ಯನ ಮೇಲೆ ಹಲ್ಲೆಯಾಗಿತ್ತು. ಹೀಗೆ ಜನಪ್ರತಿನಿಧಿಗಳ ಮೇಲೆ ಹಲ್ಲೆ ಮುಂದುವರಿದರೆ ಜನಸಾಮಾನ್ಯರ ಗತಿ ಏನು? ಆದ್ದರಿಂದ ಚುನಾಯಿತ ದಲಿತ ಜನಪ್ರತಿಧಿಗಳ ಮೇಲೆ ಹಲ್ಲೆ ಮಾಡಿದವರ ವಿರದ್ಧ ಎಸ್.ಸಿ, ಎಸ್.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನೊಂದವರಿಗೆ ರಕ್ಷಣೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಸಂಘಟನೆಯ ಶಿವಾಜಿನಗರ ತಿಪ್ಪೇಸ್ವಾಮಿ, ಕೆ. ರಾಜು, ಕಾರೇಹಳ್ಳಿ ರಂಗನಾಥ್, ತಿಪ್ಪೇಶ್.ಕೆ.ಕೆ, ದಿನೇಶ್, ರಂಗನಾಥಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
