ಇಡೀ ಜಗತ್ತಿನ ಗಮನ ಸೆಳೆದಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿದ್ದು, ಅಂತಿಮವಾಗಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಶಿರಾ ತಾಲೂಕು ಆಮ್ ಆದ್ಮಿ ಪಾರ್ಟಿಯ ಅಧ್ಯಕ್ಷ ಗೋಮಾರದಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲಿಗೆ ಪೆನ್ ಡ್ರೈವ್‌ನಲ್ಲಿರುವ ವಿಡಿಯೋಗಳನ್ನು ವೈಜ್ಞಾನಿಕ ಪರೀಕ್ಷೆ ನಡೆಸಿ ಅದರ ಸತ್ಯಾಸತ್ಯತೆ ಖಚಿತಪಡಿಸಬೇಕು. ಸತ್ಯ ಎಂದಾದರೆ ಅದಕ್ಕೆ ಕಾರಣವಾದ ಪ್ರಜ್ವಲ್ ರೇವಣ್ಣ ಮೇಲೆ ದಿಟ್ಟ ಕ್ರಮ ಕೈಗೊಳ್ಳಬೇಕು. ತದನಂತರ ಆ ವಿಡಿಯೋಗಳನ್ನು ಬಹಿರಂಗಪಡಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿ ಸಂತ್ರಸ್ತೆಯರ ವಿಚಾರಣೆ ನಡೆಸುವುದಾಗಲಿ, ಯಾವ ಸಂತ್ರಸ್ತೆಯರು ದೂರು ಕೊಡಲು ಮುಂದೆ ಬರುತ್ತಿಲ್ಲವೆಂದು ಸಾಬೂಬು ಹೇಳುವ ಅಗತ್ಯವಿಲ್ಲ. ಈಗಾಗಲೇ ಸಂತ್ರಸ್ತೆಯರು ಮತ್ತು ಅವರ ಕುಟುಂಬದವರು ನೊಂದಿದ್ದು, ಅವರನ್ನು ಮತ್ತಷ್ಟು ಘಾಸಿಗೊಳಿಸಬಾರದು. ವಿಡಿಯೋಗಳು ಸತ್ಯವೇ ಅಥವಾ ಕೃತಕವಾಗಿ ಸೃಷ್ಟಿಸಲಾಗಿದೆಯೇ ಎಂಬುದಷ್ಟೇ ಇಲ್ಲಿ ಮುಖ್ಯ. ಸತ್ಯ ಎಂದಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಸಿ. ಸುಳ್ಳು ಎಂದಾದರೆ ಪ್ರಕರಣಕ್ಕೆ ಅಂತ್ಯ ಹಾಡಿ ಎಂದರು.