ಜೂನ್ 2 ರಿಂದ 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಆರಂಭಗೊಳ್ಳಲಿದ್ದು, ಭಾರತ ತಂಡ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಬಿಸಿಸಿಐ ರೋಹಿತ್ ಶರ್ಮಾ ಸಾರಥ್ಯದಲ್ಲಿ ನಾಲ್ವರು ಮೀಸಲು ಆಟಗಾರರನ್ನು ಒಳಗೊಂಡು 19 ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.
ಇಲ್ಲಿಯವರೆಗೂ ನಡೆದ ಎಂಟು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಒಮ್ಮೆ 2007ರಲ್ಲಿ ಕಪ್‌ಅನ್ನು ಮುಡಿಗೇರಿಸಿಕೊಂಡಿದೆ. 2014ರಲ್ಲಿ ಫೈನಲ್ ಪ್ರವೇಶಿಸಿದರೂ ಶ್ರೀಲಂಕಾ ವಿರುದ್ಧ ಪರಾಭವಗೊಂಡಿತ್ತು. ಇನ್ನುಳಿದಂತೆ ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಲಾ ಎರಡು ಬಾರಿ ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಒಂದೊಂದು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿವೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಆರಂಭಿಕ ಕ್ರಮಾಂಕ ಬದಲಾಗುವ ಸಾಧ್ಯತೆಯಿದೆ. ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ ಸೇರಿದಂತೆ ಹಲವರು ಕ್ರಮಾಂಕ ಬದಲಾವಣೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬ್ರಿಜ್ ಭೂಷಣ್‌ಗೆ ತಪ್ಪಿದ ಲೋಕಸಭಾ ಟಿಕೆಟ್: ಪುತ್ರನಿಗೆ ಮಣೆ ಹಾಕಿದ ಬಿಜೆಪಿ
“ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಇನಿಂಗ್ಸ್ ಆರಂಭಿಸಿ ನಾಯಕ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿದೆ. ರೋಹಿತ್ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರೆ ಆಟದ ಸ್ಥಿತಿಯನ್ನು ಅರ್ಥ ಮಾಡಿಕೊಂಡು ತಂಡವನ್ನು ಅಪಾಯದಿಂದ ಪಾರು ಮಾಡಬಹುದು. ಇದು ತಂಡಕ್ಕೂ ಪ್ರಯೋಜನಕಾರಿ” ಎಂದು ಅಜಯ್ ಜಡೇಜಾ ತಿಳಿಸಿದ್ದಾರೆ.
“ ವಿರಾಟ್ ನಿಮ್ಮ ಕಡೆ ಇದ್ದರೆ ನೀವು ಸ್ಥಿರತೆಯನ್ನು ಕಾಪಾಡಿಕೊಂಡು ಅವರ ಪ್ರಯೋಜನವನ್ನು ಬಳಸಿಕೊಳ್ಳಬಹುದು. ವಿರಾಟ್ ಆರಂಭಿಕ ಆಟಗಾರನಾಗಿ ಉತ್ತಮ ಆಟಗಾರ ಹಾಗೂ ಪವರ್‌ಪ್ಲೇನಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿ ಹೆಚ್ಚು ಸಮಯ ಆಡಬಹುದು” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಜಯ್ ಜಡೇಜಾ ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವುದನ್ನು ಸ್ವಾಗತಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಬಗ್ಗೆ ಗಮನಹರಿಸಲು ಸ್ಪಷ್ಟವಾದ ಕಾರಣಗಳಿವೆ. ಅವರೊಬ್ಬರು ವಿಶೇಷ ಆಟಗಾರರಾಗಿದ್ದು,ಎದುರಾಳಿ ತಂಡದ ಪ್ರತಿತಂತ್ರಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಟೀಂ ಇಂಡಿಯಾಗೆ ಪ್ರಯೋಜನಕಾರಿಯಾಗಲಿದ್ದಾರೆ. ತಂಡದ ಆಯ್ಕೆಯಲ್ಲಿಯೂ ಕೂಡ ಒಂದಿಷ್ಟು ಗೊಂದಲಗಳಿದ್ದರೂ ಉತ್ತಮ ತಂಡವನ್ನೇ ಪ್ರಕಟಿಸಲಾಗಿದೆ. ಎಲ್ಲ ಆಟಗಾರರ ಸಾಮರ್ಥ್ಯವನ್ನು ಸದ್ಬಳಕೆಗೊಳಿಸಿಕೊಳ್ಳಲು ರೋಹಿತ್ ಅವರ ಅವಲಂಬನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
