ದಾವಣಗೆರೆಗೂ ಮೈಸೂರು ಅರಮನೆಗೂ ಅವಿನಾಭಾವ ಸಂಬಂಧವಿದೆ ಅದಕ್ಕೆ ಕಾರಣ ದಾವಣಗೆರೆ ಅಂದಿನ ಮೈಸೂರು ಮಹಾಸಂಸ್ಥಾನಕ್ಕೆ ಒಳಪಟ್ಟಿತ್ತು. ಮೋದಿಯವರು ಮೈಸೂರು ಮಹಾ ಸಂಸ್ಥಾನದ ಪ್ರತಿಧ್ವನಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದರು.
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬೃಹತ್ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಅವರು, ದಾವಣಗೆರೆಯೊಂದಿಗಿನ ಒಡನಾಟದ ಬಗ್ಗೆ ಹೇಳಿದರು.
ಹಿಂದಿನಕಾಲದಲ್ಲಿ ಮೈಸೂರಿನ ಅರಸರು ಮಾಡಿದ ಅಭಿವೃದ್ಧಿ ಕಾರ್ಯದಂತೆ ಇಂದು ಮೋದಿಯವರು ಅಭಿವೃದ್ಧಿ ಕೈಗೊಂಡಿದ್ದಾರೆ. ಮೈಸೂರು ಬ್ರಾಂಡ್ ಮೂಲಕ ವಿಶ್ವ ವಿಖ್ಯಾತಿ ಪಡೆದಿದ್ದರು. ಆಧುನಿಕತೆಯ ಮೂಲಕ ಅನೇಕ ಯೋಜನೆಗಳನ್ನು ಕೈಗೊಂಡಿದ್ದರು.ಅದೇ ರೀತಿ ಪ್ರಧಾನಿಯವರು ಮೇಕ್‌ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪನ್ನಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸೃಷ್ಟಿಸುವಂತಹ ಅವಕಾಶಗಳನ್ನು ನೀಡಿದ್ದಾರೆಂದರು.
ಭಾರತೀಯ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವಂತಹ ಯೋಜನೆಗಳನ್ನು ರೂಪಿಸಿದ್ದಾರೆ. ಮೀಸಲಾತಿ, ಮಹಿಳಾ ಸಬಲೀಕರಣ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನೆರವು ನೀಡಿದ್ದಾರೆ. ಪ್ರಧಾನಿಯವರು 56 ಯೋಜನೆಗಳ ಮೂಲಕ ದೇಶವನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.
ಮಹಿಳೆಯರು, ಯುವಕರಿಗೆ ಸ್ಟಾರ್ಟ್ ಅಪ್ ಸೃಷ್ಠಿಸಲು ಉತ್ತೇಜನ ನೀಡಿದ್ದಾರೆ. ಮೈಸೂರಿನ ಅರಸರಂತೆ ಹಿಂದೂ ಪರಂಪರೆ ಉಳಿಸುವಲ್ಲಿ ನಿರತರಾಗಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ, ಕಾಶಿ ವಿಶ್ವನಾಥ ದೇಗುಲ ಅಭಿವೃದ್ಧಿ ಮಾಡಿದ್ದಾರೆ. ಅಂದಿನಕಾಲದಲ್ಲಿ ಮೈಸೂರು ಮಹಾಸಂಸ್ಥಾನ ಕೈಗೊಂಡ ಜನಪರ ಯೋಜನೆಗಳನ್ನು ಮೋದಿ ಮುಂದುವರೆಸಿದ್ದಾರೆ. ಭಾರತವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ ಎಂದರು.
ವಿಕಸಿತ ಭಾರತಕ್ಕಾಗಿ ಮೋದಿ ಕೈ ಬಲಪಡಿಸೋಣ ಅದಕ್ಕಾಗಿ ದಾವಣಗೆರೆ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ್‌ಗೆ ಮತ ಹಾಕಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಈ ವೇಳೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಬಿಜೆಪಿ ಮುಖಂಡರಾದ ಎಸ್.ಟಿ. ವೀರೇಶ್, ಪಿ. ಶ್ರೀನಿವಾಸ್, ವಾಣಿಭೂಷಣ್ ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.
