ಗಾಂಧಿನಗರದಲ್ಲಿ ಅಮಿತ್ ಶಾ ಸ್ಪರ್ಧೆ; 16 ಮಂದಿ ನಾಮಪತ್ರ ವಾಪಸ್; ಬೆದರಿಕೆಯಿಂದ ಹಿಂದೆ ಸರಿದಿದ್ದೇವೆ ಎಂದ ಮೂವರು ಅಭ್ಯರ್ಥಿಗಳು

Date:

Advertisements

ಏಪ್ರಿಲ್ 21ರಂದು ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅವರೋಧವಾಗಿ ಗೆದ್ದಿದ್ದಾರೆಂದು ಘೋಷಿಸಲಾಗಿದೆ. ಅದೇ ದಿನ ಸಂಜೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸ್ಪರ್ಧಿಸಿರುವ ಜಿತೇಂದ್ರ ಚೌಹಾಣ್ ಅವರು, ತಮಗೆ ಅಮಿತ್ ಶಾ ಅವರ ಬೆಂಬಲಿಗರು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆ ವಿಡಿಯೋದಲ್ಲಿ ಚೌಹಾಣ್ ಗದ್ಗದಿತರಾಗಿ ಮಾತನಾಡಿದ್ದು, “ನನಗೆ ಒತ್ತಡ ಹಾಕಲಾಗುತ್ತಿದೆ. ನನ್ನನ್ನು ಕೊಲೆ ಮಾಡುವ ಸಾಧ್ಯತೆಗಳಿವೆ. ನಾನು ನನ್ನ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ: ಈ ದೇಶ ಅಪಾಯದಲ್ಲಿದೆ; ದೇಶವನ್ನು ಉಳಿಸಿ” ಎಂದು ಹೇಳಿದ್ದಾರೆ.

ಅಲ್ಲದೆ, ಏಪ್ರಿಲ್ 22ರಂದು ಅವರು ತಮ್ಮ ನಾಮಪತ್ರವನ್ನು ಹಿಂಪಡೆದರು. “ನನ್ನ ಮೇಲೆ ಒತ್ತಡವಿದ್ದ ಕಾರಣ ನಾನು ಹಿಂದೆ ಸರಿದಿದ್ದೇನೆ” ಎಂದು ಚೌಹಾಣ್ ಹೇಳಿರುವುದಾಗಿ ‘ಸ್ಕ್ರಾಲ್‌’ ವರದಿ ಮಾಡಿದೆ.

Advertisements

ಗಾಂಧಿನಗರ ಕ್ಷೇತ್ರವು 1989ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ. 2019ರಲ್ಲಿ ಅಮಿತ್ ಶಾ 5.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅದೇ ಕ್ಷೇತ್ರದಲ್ಲಿ ಅಮಿತ್ ಶಾ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಪ್ರಸ್ತುತ ಚುನಾವಣೆಯಲ್ಲಿ ಗುಜರಾತ್‌ನ 26 ಸ್ಥಾನಗಳನ್ನು 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕೆಂಬ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ವರದಿಯಾಗಿದೆ.

ಚೌಹಾಣ್ ಸೇರಿದಂತೆ ಗಾಂಧಿನಗರದ ಮೂವರು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಡಕ್ಕೆ ಒಳಗಾಗಿದ್ದಾರೆ. ತಮಗೆ ಸ್ಥಳೀಯ ಬಿಜೆಪಿ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮೂವರೂ ಆರೋಪಿಸಿದ್ದಾರೆ. ಅವರಲ್ಲಿ, ಇಬ್ಬರು ಗುಜರಾತ್ ಪೊಲೀಸರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕಿದ್ದಾರೆ ಎಂದೂ ದೂರಿದ್ದಾರೆ. ಆದರೆ, ಬಿಜೆಪಿ ಮುಖಂಡರು ಆರೋಪವನ್ನು ಅಲ್ಲಗಳೆದಿದ್ದಾರೆ.

ಈವರೆಗೆ ಗಾಂಧಿನಗರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ 16 ಮಂದಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಅವರಲ್ಲಿ, ಚೌಹಾಣ್ ಸೇರಿದಂತೆ ಹನ್ನೆರಡು ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದರು. ನಾಲ್ವರು ಸಣ್ಣ ರಾಜಕೀಯ ಪಕ್ಷಗಳಿಗೆ ಸೇರಿದವರು. ಅವರಲ್ಲಿ, 13 ಮಂದಿ ತಾವು ನಾಮಪತ್ರ ಹಿಂಪಡೆಯಲು ಯಾವುದೇ ಬೆದರಿಕೆ ಬಂದಿಲ್ಲ ಎಂದಿದ್ದಾರೆ. ಪ್ರಚಾರ ಹಣದ ಕೊರತೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ನಾಮಪತ್ರ ಹಿಂಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.

“ನನ್ನ ಬೆಲೆ ಎಷ್ಟು – ನನಗೆ ಎಷ್ಟು ಹಣ ಬೇಕೆಂಕು ಕೇಳಿದರು. ನನಗೆ ಹಣ ಬೇಕಾಗಿಲ್ಲ. ಆದರೆ, ನಾನು ನಾಮಪತ್ರ ಹಿಂಪಡೆಯಲು ಬೇರೆ ಕಾರಣಗಳಿವೆ. ನನಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಬೇಕು. ನನಗೆ ಏನಾದರೂ ಆಗಿಬಿಟ್ಟರೆ, ಅವರು ಹೇಗೆ ಬದುಕುತ್ತಾರೆ” ಎಂದು ಔಹಾಣ್ ಹೇಳಿದ್ದಾರೆ.

“ಏಪ್ರಿಲ್ 21 ರಂದು, ಕ್ರೈಂ ಬ್ರಾಂಚ್‌ನ ನಾಲ್ವರು ಸಿಬ್ಬಂದಿಗಳು ಅಹಮದಾಬಾದ್‌ನ ಎಲ್ಲೆಡೆ ನನ್ನನ್ನು ಹಿಂಬಾಲಿಸಿದರು. ಅಲ್ಲದೆ, ಅವರು ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದ ನಾಲ್ವರಿಗೆ ಕಿರುಕುಳ ನೀಡಿದ್ದಾರೆ” ಚೌಹಾಣ್ ದೂರಿದ್ದಾರೆ. ಈ ಬಗ್ಗೆ ವಿಡಿಯೋ ಅಪ್‌ಲೋಡ್ ಮಾಡಿದ್ದ ಅವರು, ಅವರ ಪತ್ನಿಯ ವಿರೋಧದ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

“ಬಿಜೆಪಿ ಶಾಸಕ ದಿನೇಶ್ ಸಿನ್ಹ್ ಕುಶ್ವಾ ಕೂಡ ತಮ್ಮನ್ನು ಸ್ಪರ್ಧಿಸದಂತೆ ಒತ್ತಡ ಹಾಕಿದರು” ಎಂದು ಚೌಹಾಣ್ ವಿವರಿಸಿದ್ದಾರೆ.

ಇನ್ನು, ಪ್ರಜಾತಂತ್ರ ಆಧಾರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಿತ್ರಾ ಮೌರ್ಯ ಕೂಡ ತಮಗೆ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ. “ಏಪ್ರಿಲ್ 20ರ ಬೆಳಗ್ಗೆ 10ಕ್ಕೂ ಹೆಚ್ಚು ಮಂದಿ ತಮ್ಮ ಮನೆಗೆ ನುಗ್ಗಿದರು. ಅವರು ಮನೆಗೆ ಬಂದಾಗ ಇಬ್ಬರು ಪುಟ್ಟ ಮಕ್ಕಳಷ್ಟೇ ಮನೆಯಲ್ಲಿದ್ದರು. ನಾನು ಆಗ ನಾಮಪತ್ರ ಸಲ್ಲಿಕೆಯ ಕೆಲಸದಲ್ಲಿದ್ದೆ. ಅವರು ನನ್ನನ್ನು ಭೇಟಿ ಮಾಡಬೇಕೆಂದು ಹೇಳಿ ಮನೆಯಿಂದ ಹೊರಟು ಹೋದರು. ಆದರೆ, ನನ್ನ ಮಕ್ಕಳು ತುಂಬಾ ಹೆದರಿದ್ದರು” ಎಂದು ಮೌರ್ಯ ಹೇಳಿದ್ದಾರೆ.

“ಆ ದಿನ ನನಗೂ, ನನ್ನ ಪತಿಗೂ ಸರಣಿ ದೂರವಾಣಿ ಕರೆಗಳು ಬಂದವು.  ನಮ್ಮ ಬಾಸ್ ನಿನ್ನೊಂದಿಗೆ ಮಾತನಾಡಬೇಕೆಂದು ಹೇಳಿದರು. ‘ಯಾಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೀಯಾ – ಸ್ಪರ್ಧೆಯಿಂದ ಹಿಂದೆ ಸರಿಯಬೇಕು’ ಎಂದು ಹೇಳಿದರು. ಅಲ್ಲದೆ, ನಮ್ಮ ಅತ್ತೆಯನ್ನೂ ಭೇಟಿಯಾಗಿ ಒತ್ತಡ ಹಾಕಿದ್ದರು. ಇದೆಲ್ಲದರಿಂದ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಮೌರ್ಯ ಕೆಲವು ದಿನಗಳ ಕಾಲ ಪಟ್ಟಣ ತೊರೆಯಲು ನಮಗೆ ಸೂಚಿಸಿದರು” ಎಂದು ಅವರು ವಿವರಿಸಿದ್ದಾರೆ.

ಏಪ್ರಿಲ್ 21 ರಂದು ಬೆಳಿಗ್ಗೆ ಮೌರ್ಯ ಮತ್ತು ಅವರ ಪತಿ ಭರತ್ ಅಹಮದಾಬಾದ್‌ನಿಂದ 400 ಕಿ.ಮೀ ದೂರದಲ್ಲಿರುವ ಸೋಮನಾಥಕ್ಕೆ ತೆರಳಿದರು. “ಸೋಮನಾಥದಲ್ಲಿ ನಮ್ಮ ಹೋಟೆಲ್‌ಗೆ ಮೂವರು ಬಂದಿದ್ದರು. ಅವರು ನಾಗರಿಕ ಉಡುಪುಗಳನ್ನು ಧರಿಸಿದ್ದರು. ಅವರು ಸ್ಥಳೀಯ ಕ್ರೈಮ್ ಬ್ರಾಂಚ್‌ ಪೊಲೀಸರು ಎಂಬುದು ನಂತರ ಗೊತ್ತಾಯಿತು” ಎಂದು ಮೌರ್ಯ ಹೇಳಿರುವುದಾಗಿ ಸ್ಕ್ರಾಲ್ ವರದಿ ಮಾಡಿದೆ.

ಏಪ್ರಿಲ್ 22 ರಂದು, ಪ್ರಜಾತಂತ್ರ ಆಧಾರ್ ಪಕ್ಷದ ರಾಜೇಶ್ ಮೌರ್ಯ ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ಏಪ್ರಿಲ್ 20 ಮತ್ತು 21ರಂದು ನಡೆದ ಘಟನೆಗಳ ಬಗ್ಗೆ ವಿವರಿಸಿದ್ದಾರೆ.

ಅದಾಗ್ಯೂ, ಸುಮಿತ್ರಾ ಮೌರ್ಯ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ.

ಇನ್ನು, ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ, ದಲಿತ ಸಮುದಾಯದ ಜಯೇಂದ್ರ ರಾಥೋಡ್ ಕೂಡ ತಮಗೆ ನಾಮಪತ್ರ ಹಿಂಪಡೆಯುವಂತೆ ಗಾಂಧಿನಗರ ಉತ್ತರದ ಮಾಜಿ ಬಿಜೆಪಿ ಶಾಸಕ ಅಶೋಕ್ ಪಟೇಲ್ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. “ನಾನು ಅವರೊಂದಿಗೆ ಹೊಂದಿಕೊಳ್ಳಬೇಕು. ಅಂತಿಮವಾಗಿ ಅಮಿತ್ ಶಾ ಗೆಲ್ಲುತ್ತಾರೆ. ಆದರೆ, ನಾನು ಅವರ ಮತವನ್ನು ವಿಭಜಿಸುವುದು ಅವರಿಗೆ ಇಷ್ಟವಿಲ್ಲ ಎಂಬುದಾಗಿ ಪಟೇಲ್ ಹೇಳಿದ್ದಾರೆ” ಎಂದು ರಾಥೋಡ್ ಆರೋಪಿಸಿದ್ದಾರೆ.

“ಬಿಜೆಪಿ ಮಾಜಿ ಶಾಸಕ ಪಟೇಲ್ ಅವರ ಬೆಂಬಲಿಗರು ಸರ್ಕಾರಿ ನೌಕರಿಯಲ್ಲಿರುವ ನನ್ನ ಚಿಕ್ಕಪ್ಪನೊಂದಿಗೆ ಮಾತನಾಡಿದ್ದಾರೆ. ಅವರಿಗೂ ಒತ್ತಡ ಹಾಕಿದ್ದಾರೆ. 2019ರಲ್ಲಿ ಸ್ಪರ್ಧಿಸಿದ್ದಾಗಲೂ ನನ್ನ ಮೇಲೆ ಒತ್ತಡವಿತ್ತು. ಆದರೆ, ಆಗ ನಾನು ಹಿಂದೆ ಸರಿಯಲಿಲ್ಲ. ಈ ಬಾರಿ ನನ್ನ ಚಿಕ್ಕಪ್ಪನ ಗೌರವ ಉಳಿಸಿಕೊಳ್ಳುವ ಕಾರಣದಿಂದಾಗಿ ನಾಮಪತ್ರ ಹಿಂಪಡೆದಿದ್ದೇನೆ” ಎಂದು ಹೇಳಿದ್ದಾರೆ.

“ಸ್ಪರ್ಧೆಯಿಂದ ಹಿಂದೆ ಸರಿದ ಬಳಿ, ತಮಗೆ ಬಿಜೆಪಿ ಸೇರುವಂತೆಯೂ ಕೇಳಲಾಯಿತು. ಆದರೆ, ನಾನು ಸೇರಲು ನಿರಾಕರಿಸಿದೆ. ಆದರೆ, ಸ್ವತಂತ್ರರಾಗಿ ಸ್ಪರ್ಧಿಸಿದ್ದ ಸುರೇಂದ್ರ ಶಾ ಮತ್ತು ನರೇಶ್ ಪ್ರಿಯದರ್ಶಿ – ತಮ್ಮ ನಾಮಪತ್ರ ಹಿಂಪಡೆದ ಬಳಿಕ ಬಿಜೆಪಿ ಸೇರಿದ್ದಾರೆ” ಎಂದು ರಾಥೋಡ್ ವಿವರಿಸಿದ್ದಾರೆ.

ಆರೋಪವನ್ನು ಪಟೇಲ್ ನಿರಾಕರಿಸಿದ್ದಾರೆ. ನಾವು ಅವರಿಗೆ ಯಾವುದೇ ಒತ್ತಡ ಹಾಕಿಲ್ಲ. ಆತ ಯಾರು ಎಂಬುದೇ ನನಗೆ ಗೊತ್ತಿಲ್ಲವೆಂದು ಪಟೇಲ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X