ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ದುಷ್ಕರ್ಮಿಯೊಬ್ಬ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಇತರೆ ಅಧಿಕಾರಿಗಳಿಗೆ ಬೆದರಿಕೆ ಕರೆ ಮಾಡಿ ಕಿರುಕುಳ ನೀಡಿದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಸ್ಕಾಂ ಅಧಿಕಾರಿ ಮೃತ್ಯುಂಜಯ ಅವರಿಗೆ ಮೇ 1ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಈ ವೇಳೆ, ತನ್ನನ್ನು ತಾನು ಲೋಕಾಯುಕ್ತ ಪೊಲೀಸ್ ಎಂದು ಹೇಳಿಕೊಡಿದ್ದಾನೆ. ಅಲ್ಲದೇ, ಬೆಸ್ಕಾಂ ಕಚೇರಿಯಲ್ಲಿರುವ ಎಲ್ಲರ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹೀಗೆ, ದುಷ್ಕರ್ಮಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಅವರ ಆಪ್ತ ಕಾರ್ಯದರ್ಶಿ ಚಂದ್ರಶೇಖರ್, ತಾಂತ್ರಿಕ ಸಹಾಯಕ ಎಸ್.ವಿ.ನವನೀತ್ ಕೃಷ್ಣನ್ ಹಾಗೂ ಬೇರೆ ಬೇರೆ ಅಧಿಕಾರಿಗಳಿಗೆ ದುಷ್ಕರ್ಮಿ ಕರೆ ಮಾಡಿ ಮಾತಾಡಿದ್ದಾನೆ.
ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಲೋಕಾಯುಕ್ತ ಕಚೇರಿಯನ್ನು ಸಂಪರ್ಕ ಮಾಡಿದಾಗ ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಿದ್ದಾರೆ. ಅದರಂತೆ, ಬೆಸ್ಕಾಂ ಅಧಿಕಾರಿಗಳು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟ್ರೂ ಕಾಲರ್ನಲ್ಲಿ ಲೋಕಾಯುಕ್ತ ಡಿವೈಎಸ್ಪಿ ಎಂಬ ಹೆಸರಿನಲ್ಲಿ ಕರೆ ಬರುತ್ತಿತ್ತು ಎಂದು ಬೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆ ಅನಾಹುತ; ₹1.18 ಕೋಟಿ ನಷ್ಟ ಅನುಭವಿಸಿದ ಬೆಸ್ಕಾಂ
“ಲೋಕಾಯುಕ್ತ ಪೊಲೀಸರ ಹೆಸರು ಹೇಳಿಕೊಂಡು ವಿನಾಕಾರಣ ಅಪರಿಚಿತರು ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಬೆಸ್ಕಾಂ ಅಧಿಕಾರಿ ಮೃತ್ಯುಂಜಯ ಅವರು ಬೆದರಿಕೆ ಕರೆಗಳ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.