ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಬಿಜೆಪಿ ಭಾರೀ ಭಯಭೀತವಾಗಿದೆ. ಮಹಾರಾಷ್ಟ್ರಕ್ಕೆ ಮೋದಿ ಭೇಟಿಯು ಇದನ್ನು ಎತ್ತಿ ತೋರಿಸುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ, ಮೋದಿ 12 ಬಾರಿ ಆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 5ನೇ ಹಂತದ ಚುನಾವಣೆ ರಾಜ್ಯದಲ್ಲಿ ಮುಗಿಯುವ ವೇಳೆಗೆ ಇನ್ನೂ ಆರೇಳು ಬಾರಿ ಭೇಟಿ ನೀಡುವ ಸಾಧ್ಯತೆಗಳಿವೆ. ಸದ್ಯಕ್ಕೆ, ಮೇ 7 ರಂದು ಮಹಾರಾಷ್ಟ್ರದಲ್ಲಿಯೂ ಮೂರನೇ ಹಂತದ ಮತದಾನ ನಡೆಯಲಿದ್ದು, ಈ ಮತದಾನದಲ್ಲಿಯೂ ಬಿಜೆಪಿಯ ಪರಿಸ್ಥಿತಿ ಏನಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.
2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ 5 ರ್ಯಾಲಿಗಳನ್ನು ನಡೆಸಿದ್ದರು. ಆದರೆ, ಈ ಬಾರಿ, ಹತ್ತಾರು ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಇದು, ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿಗೆ ಮಹಾರಾಷ್ಟ್ರ ಸವಾಲಿನ ರಾಜ್ಯವಾಗಿದೆ ಎಂಬುದು ಅರ್ಥವಾಗುತ್ತದೆ. ಅಪರೂಪದ ನಿದರ್ಶನವೆಂದರೆ, ಒಂದೇ ಜಿಲ್ಲೆಯಲ್ಲಿ ಮೋದಿ ಅವರು ಎರಡೆರಡು ಬಾರಿ ಪ್ರಚಾರ ನಡೆಸುತ್ತಿರುವುದು ಕಂಡುಬರುತ್ತಿದೆ.
ಈ ಎಲ್ಲ ಸಂಗತಿಗಳು ಒಂದು ವಿಷಯವನ್ನು ಸೂಚಿಸುತ್ತವೆ: ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಿಸಲು ಸ್ಥಳೀಯ ನಾಯಕರಿಗೆ ಬಿಡುವುದು ಬಿಜೆಪಿ ನಾಯಕತ್ವಕ್ಕೆ ಕಷ್ಟವಾಗಿದೆ. ಹೀಗಾಗಿಯೇ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆ ರಾಜ್ಯದಲ್ಲಿ ಬಿಜೆಪಿ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದು, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ತ್ರಿಪಕ್ಷೀಯ (ಬಿಜೆಪಿ, ಶಿವಸೇನಾದ ಒಂದು ಬಣ, ಎನ್‌ಸಿಪಿಯ ಒಂದು ಬಣ) ನಾಯಕರ ಮೇಲೆ ನಂಬಿಕೆಯನ್ನು ಹೊಂದಿಲ್ಲ ಎಂಬುದನ್ನು ಸೂಚಿಸುತ್ತದೆ.
ರಾಜ್ಯದಲ್ಲಿ ಬಿಜೆಪಿಯ ಅಮಸರ್ಥತೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿಯು ಒಗ್ಗಟ್ಟಿನ ಶಕ್ತಿಯಾಗಿ ಜನರೆದುರು ಕಾಣಿಸಿಕೊಳ್ಳುವಲ್ಲಿ ಎಡವಿದೆ. ನಿಗದಿತ ಸಮಯದೊಳಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಈ ಮೈತ್ರಿಗೆ ಸಾಧ್ಯವಾಗಲಿಲ್ಲ. ಕೆಲವೆಡೆ ನಾಮಪತ್ರ ಸಲ್ಲಿಕೆಗೆ ಅಂತಿಮ ಅವಧಿ ಸಮೀಪಿಸುತ್ತಿದ್ದಾಗ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಇದಾದ ಬಳಿಕ, ಬಿಜೆಪಿ ಕೆಚ್ಚೆದೆಯಿಂದ ಕಣಕ್ಕಿಳಿಯಲು ಯತ್ನಿಸಿತ್ತಾದರೂ, ಇದೇ ಸಮಯದಲ್ಲಿ ಮೈತ್ರಿಯೊಳಗಿನ ಬಿರುಕು ಬಹಿರಂಗವಾಗಿದೆ. ಇತ್ತ, ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯ ಮೈತ್ರಿಯಲ್ಲಿಯೂ ಅಸಮಾಧನ ಇತ್ತಾದರೂ, ಅದು ಬಿಜೆಪಿ ನೇತೃತ್ವದ ಮೈತ್ರಿಗೆ ಹೋಲಿಸಿದರೆ, ಒಡಕು ಅಷ್ಟೇನೂ ದೊಡ್ಡದಾಗಿಲ್ಲ.
ಅಲ್ಲದೆ, ಕಾಂಗ್ರೆಸ್, ಅವಿಭಜಿತ ಶಿವಸೇನೆ ಹಾಗೂ ಅವಿಭಜಿತ ಎನ್‌ಸಿಪಿಯ ಮಹಾವಿಕಾಸ್ ಅಗಾಡಿ ಅಧಿಕಾರದಲ್ಲಿದ್ದಾಗ ಬಿಜೆಪಿ ವಿರೋಧ ಪಕ್ಷವಾಗಿತ್ತು. ಅಗ, ಎನ್‌ಸಿಪಿ ಮತ್ತು ಶಿವಸೇನೆ ವಿರುದ್ಧ ಭ್ರಷ್ಟ ನಾಯಕರು ಎಂಬ ಕೂಗನ್ನು ಪದೇ-ಪದೇ ಮುನ್ನೆಲೆಗೆ ತಂದಿತ್ತು. ಈ ಎರಡೂ ಪಕ್ಷಗಳ ಹಲವಾರು ನಾಯಕರು ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿಗೂ ಒಳಗಾಗಿದ್ದರು. ಅದರೆ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಅದೇ ನಾಯಕರು ಎರಡೂ ಪಕ್ಷಗಳನ್ನು (ಶಿವಸೇನೆ-ಎನ್‌ಸಿಪಿ) ಒಡೆದು, ಬಿಜೆಪಿ ಜೊತೆ ಕೈಜೋಡಿಸಿ, ಸರ್ಕಾರ ರಚಿಸಿದರು. ಆ ಬೆನ್ನಲ್ಲೇ ಅವರ ವಿರುದ್ಧದ ಪ್ರಕರಣಗಳನ್ನು ಮುಚ್ಚಲಾಯಿತು. ಅವರೆಲ್ಲರೂ ಬಿಜೆಪಿ ಜೊತೆ ಸೇರಿದ್ದು, ಬಿಜೆಪಿ ವಿರುದ್ಧದ ‘ವಾಷಿಂಗ್ ಮೆಷಿನ್’ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿದ್ದಾರೆ. ಜೊತೆಗೆ, ರಾಜ್ಯ ಬಿಜೆಪಿ ನಾಯಕತ್ವವು ತನ್ನದೇ ಕಾರ್ಯಕರ್ತರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸುತ್ತಿದೆ. ಕೆಲವು ತಿಂಗಳ ಹಿಂದೆ ಜೈಲು ಸೇರಿದ್ದವರು ಈಗ ಮೈತ್ರಿ ಅಭ್ಯರ್ಥಿಗಳಾಗಿದ್ದಾರೆ, ಅವರ ಪರವಾಗಿ ಮತ ಕೇಳುವುದು ಕಷ್ಟವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಬಿಜೆಪಿಗೆ ರಾಷ್ಟ್ರೀಯ ನಾಯಕರ ಅಗತ್ಯವಿದೆ. ಹೀಗಾಗಿ ಮೋದಿ-ಶಾ ಜೋಡಿಯ ಮೇಲೆ ಒತ್ತಡವಿದೆ.
ಮಾತ್ರವಲ್ಲದೆ, ಬಿಜೆಪಿಯು ಎರಡು ಅಂಶಗಳಲ್ಲಿ ತಪ್ಪಾಗಿ ಲೆಕ್ಕಾಚಾರ ಮಾಡಿದೆ; ಅದು ಅಜಿತ್ ಪವಾರ್ ಅವರ ಶಕ್ತಿ ಮತ್ತು ಶರದ್ ಪವಾರ್ ಅವರ ದೃಢತೆ. ಅಜಿತ್ ಅವರು ಈಗ ‘ಒಂದು ಕ್ಷೇತ್ರದ ನಾಯಕ’ರಾಗಿದ್ದಾರೆ. ಅವರು ಬಾರಾಮತಿ ಕ್ಷೇತ್ರದಲ್ಲಿ ತಮ್ಮ ಪತ್ನಿ ಸುನೇತ್ರಾ ಅವರನ್ನು ಕಣಕ್ಕಿಳಿಸಿದ್ದು, ಅಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅರೆ, ಶರದ್ ಪವಾರ್ ಪ್ರಭಾವಿ ನಾಯಕ, ಅವರು ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಬಾರಾಮತಿಯನ್ನು ಕಳೆದುಕೊಳ್ಳುವ ಭಯವು ಅಜಿತ್ ಅವರನ್ನು ಎಷ್ಟರಮಟ್ಟಿಗೆ ಕಾಡಿದೆ ಎಂದರೆ, ಅವರು ತಮ್ಮ ಮಿತ್ರರೇ ಕಣದಲ್ಲಿರುವ ಕ್ಷೇತ್ರಗಳಲ್ಲಿ ಮೋದಿ ನಡೆಸಿದ ರ್ಯಾಲಿಗಳಲ್ಲಿಯೂ ಭಾಗಿಯಾಗಲು ಸಾಧ್ಯವಾಗಲಿಲ್ಲ. ಬಾರಾಮತಿಯನ್ನು ತನ್ನ ಚಿಕ್ಕಪ್ಪನಿಂದ (ಶರದ್ ಪವಾರ್) ಕಿತ್ತುಕೊಳ್ಳುವ ಅಜಿತ್ ಅವರ ಹತಾಶೆಯು ರಾಜ್ಯದಲ್ಲಿ ಮೋದಿ-ಶಾ ಅವರ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.
ತಪ್ಪಿಸಿಕೊಳ್ಳಲಾಗದ ಇನ್ನೊಂದು ಅಂಶವೆಂದರೆ, ಬಿಜೆಪಿಯು ತನ್ನ ಹಿಂದಿನ ಜೊತೆಗಾರ – ಈಗಿನ ಸವಾಲುಗಾರ ಉದ್ಧವ್ ಠಾಕ್ರೆಯವರ ಸೇನೆಯನ್ನು ಎದುರಿಸಲಾಗದೇ ಇರುವುದು ಬಿಜೆಪಿಯ ಅಧೋಗತಿಯನ್ನು ತೋರುತ್ತಿದೆ. ಮಹಾರಾಷ್ಟ್ರದ 28 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ, ಕೇವಲ 4 ಸ್ಥಾನಗಳಲ್ಲಿ ಮಾತ್ರವೇ ಠಾಕ್ರೆ ಅವರ ಶಿವಸೇನೆಯೊಂದಿಗೆ ನೇರ ಹೋರಾಟ ನಡೆಸುತ್ತಿದೆ. ಇದು ಠಾಕ್ರೆ ಅವರ ಅಭ್ಯರ್ಥಿಗಳಿಗೆ ಸವಾಲು ಹಾಕಲು ಬಿಜೆಪಿ ತೋರುತ್ತಿರುವ ಹಿಂಜರಿಕೆಯನ್ನು ಚಿತ್ರಿಸುತ್ತದೆ.
ಉದ್ಧವ್ ಅವರ ಅಭ್ಯರ್ಥಿಗಳು ಕೂಡ ಕೇಸರಿ ಬಣ್ಣ ಬಳಿದುಕೊಂಡಿರುವುದರಿಂದ ಅವರನ್ನು ಹಿಂದುತ್ವದ ಸುತ್ತಿಗೆಯಿಂದ ಹೊಡೆಯುವುದು ಬಿಜೆಪಿಗೆ ಕಷ್ಟವಾಗುತ್ತಿದೆ. ಹಾಗಾಗಿ, ಮೂಲದಿಂದಲೂ ಜಾತ್ಯಾತೀತ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರುದ್ಧ ಬಿಜೆಪಿ ಕಣಕ್ಕಿಳಿದು, ಹೋರಾಟ ನಡೆಸುತ್ತಿದೆ. ಇದೇ ಸುಲಭದ ಮಾರ್ಗವೆಂದು ಬಿಜೆಪಿ ಭಾವಿಸಿದೆ.
ಈ ವರದಿ ಓದಿದ್ದೀರಾ?: ರಾಹುಲ್ ವಯನಾಡು ತೊರೆದರೆ, ಕೇರಳದಲ್ಲಿ ಕಾಂಗ್ರೆಸ್ ಭವಿಷ್ಯವೇನು?; ಕೈ ಹಿಡಿತಾರಾ ಪ್ರಿಯಾಂಕಾ
‘ಚಾರ್ ಸೋ ಬಾರ್’ ಘೋಷಣೆಯ ಆಚೆಗೂ ಮೋದಿಗೆ ಮೂರನೇ ಅವಧಿಯ ಹೋರಾಟ ಕಠಿಣವಾಗಿದೆ. ಈ ಕಠಿಣ ಹೋರಾಟದ ಜೊತೆಗೆ, ಮತ್ತೊಂದು ಹೋರಾಟ ಮೋದಿ-ಶಾ ಮುಂದಿದೆ; ಇದೇ ವರ್ಷದ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಗಿಟ್ಟಿಸಿಕೊಳ್ಳುವ ಭರವಸೆ ಮೂಡಬೇಕೆಂದರೆ, ಈ ಲೋಕಸಭಾ ಚುನಾವಣೆಯಲ್ಲಿ ಸಾಧ್ಯವಾದಷ್ಟೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ವಿಫಲವಾದರೆ, ಮೈತ್ರಿಯೊಳಗೆ ಹೆಚ್ಚಿನ ಸ್ಥಾನಗಳಿಗೆ ಚೌಕಾಸಿ ಮಾಡಲು ಬಿಜೆಪಿ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 48 ಸ್ಥಾನಗಳ ಪೈಕಿ, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ ಗೆಲುವನ್ನು 30 ಸ್ಥಾನಕ್ಕಿಂತ ಕಡಿಮೆ ಮಾಡಿದರೆ, ಪ್ರತಿಪಕ್ಷಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲವಾಗಿ ಆಟ ಆಡಬಹುದು.
ಈ ಎಲ್ಲ ಕಾರಣಗಳಿಂದಾಗಿ ಈ ಚುನಾವಣೆಯು ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಸವಾಲಾಗಿದೆ. ಹೀಗಾಗಿಯೇ, ಮೋದಿ ಮತ್ತೆ-ಮತ್ತೆ ಮಹಾರಾಷ್ಟ್ರದಲ್ಲಿ ಸುತ್ತುತ್ತಿದ್ದಾರೆ. ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಹಿಂದೆ ಇದ್ದ ಮೈತ್ರಿ ಸರ್ಕಾರವನ್ನು ಉರುಳಿಸಿ, ರಾಜ್ಯದ ಎರಡು ಪ್ರಮುಖ ಪಕ್ಷಗಳನ್ನು ಒಡೆದು ಇಬ್ಬಾಗ ಮಾಡಿ, ಅಧಿಕಾರಕ್ಕೆ ಬಂದಿರುವ ಬಿಜೆಪಿ ವಿರುದ್ಧ ಜನರಲ್ಲಿ ಅಸಮ್ಮತಿಯೂ ಇದೆ. ಈ ಅಸಮ್ಮತಿಯು ಬಿಜೆಪಿಗೆ ಹೊಡೆತ ನೀಡುವುದು ಖಚಿತವೆಂದೂ ಹೇಳಲಾಗುತ್ತಿದೆ.