ಜೂನ್ 2ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗುವ 9ನೇ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟಕ್ಕೆ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದಾರೆ ಎಂದು ಟ್ರಿನಿಡಾಡ್‌ನ ಪ್ರಧಾನಿ ಡಾ. ಕೈತ್ ರೌಲೇ ತಿಳಿಸಿದ್ದಾರೆ.
ಭಯೋತ್ಪಾದಕರ ಬೆದರಿಕೆ ದಾಳಿ ಹಿನ್ನೆಲೆಯಲ್ಲಿ ಅಪಾಯವನ್ನು ಮಟ್ಟಹಾಕಲು ರಾಷ್ಟ್ರೀಯ ಭದ್ರತೆ ಹಾಗೂ ಪ್ರತಿಕ್ರಿಯೆಯ ಸಿದ್ಧತೆಯ ತಯಾರಿಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
“ದುರಾದೃಷ್ಟವಶಾತ್, 21 ಶತಮಾನದ ವಿಶ್ವದಲ್ಲೂ ಭಯೋತ್ಪಾದಕರ ಬೆದರಿಕೆ ಅನೇಕ ವಿವಿಧ ದೇಶಗಳಲ್ಲಿ ಇಂದಿಗೂ ಇರುವ ಅಪಾಯಗಳಲ್ಲಿ ಒಂದಾಗಿದೆ. ವೆಸ್ಟ್ ಇಂಡೀಸಿನ 6 ಸ್ಥಳಗಳಲ್ಲಿ ವಿಶ್ವಕಪ್ ನಡೆಯಲಿದ್ದು,ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ಎಲ್ಲ ಸ್ಥಳಗಳಲ್ಲೂ ಯಾವುದೇ ಭದ್ರತೆ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು” ಎಂದು ಪ್ರದಾನಿ ಡಾ. ಕೈತ್ ರೌಲೇ ತಿಳಿಸಿದ್ದಾರೆ.
“ ದುಷ್ಟ ವ್ಯಕ್ತಿಗಳು ಯಾವುದೇ ರೀತಿಯಲ್ಲಿ ತಪ್ಪಾಗಿ ವರ್ತಿಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ, ಇದನ್ನು ಎಲ್ಲ ಹಂತಗಳಲ್ಲಿಯೂ ಸಂಪೂರ್ಣವಾಗಿ ಅಸಾಧ್ಯವಾಗಿಸುತ್ತೇವೆ. ಹಲವು ಬೆದರಿಕೆಯಿರುವ ಕಾರಣದಿಂದ ಈ ಅಪಾಯವನ್ನು ಸುಧಾರಿಸುವ ಸಲುವಾಗಿ ನಾವು ಸ್ಥಳೀಯ ಹಾಗೂ ಪ್ರಾದೇಶಿಕ ಹಂತಗಳಲ್ಲಿ ಎಚ್ಚರಿಕೆವಹಿಸುತ್ತೇವೆ. ಏಕಾಂಗಿಯಾಗಿ ಅಥವಾ ಒಟ್ಟಾಗಿ ನಮ್ಮ ಗುಪ್ತಚರ ಇಲಾಖೆ ಹಾಗೂ ಭದ್ರತಾ ಪಡೆ ದೇಶದ ಜನರಿಗೆ ಹಾಗೂ ಟೂರ್ನಿ ನಡೆಯುವ ಎಲ್ಲ ಸ್ಥಳಗಳಲ್ಲೂ ಹೆಚ್ಚಿನ ಭದ್ರತೆ ನೀಡುತ್ತೇವೆ” ಎಂದು ಪ್ರಧಾನಿ ಹೇಳಿರುವ ಹೇಳಿಕೆಯನ್ನು ಟ್ರಿನಿಡಾಡ್ ಮಾಧ್ಯಮವೊಂದು ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಕನ್ನಡಿಗ ಕ್ರಿಕೆಟರ್‌ಗೆ ಸ್ಥಾನ
ಆದಾಗ್ಯೂ ರೌಲೇ ಅವರು ಬೆದರಿಕೆಯೊಡ್ಡಿರುವ ಸಂಸ್ಥೆಯ ಯಾವುದೇ ಹೆಸರನ್ನು ಹೇಳಲಿಲ್ಲ. ಆದರೆ ವರದಿಗಳ ಪ್ರಕಾರ ಸಂಘಟನೆಯೊಂದು ತನ್ನ ಪ್ರಚಾರ ಸಂಸ್ಥೆಯ ಮೂಲಕ ಬೆದರಿಕೆಯೊಡ್ಡಿದೆ ಎನ್ನಲಾಗಿದೆ.
ವೆಸ್ಟ್ ಇಂಡೀಸಿನ ಆಂಟಿಗುವಾ, ಬರ್ಬುಡಾ, ಬರ್ಬೋಡಾಸ್, ಗಯಾನ, ಸೈಂಟ್ ಲೂಸಿಯಾ, ಸೇ. ವಿನ್ಸೆಂಟ್ ಹಾಗೂ ಗ್ರೆನಾಡಾ, ಟ್ರಿನಿಡಾಡ್ ಸ್ಥಳಗಳಲ್ಲಿ ಟೂರ್ನಿ ನಡೆಯಲಿದೆ. ಇದನ್ನು ಹೊರತುಪಡಿಸಿದರೆ ಅಮೆರಿಕದ ಫ್ಲೋರಿಡಾ, ನ್ಯೂಯಾರ್ಕ್ ಹಾಗೂ ಟೆಕ್ಸ್‌ಸ್ ನಲ್ಲೂ ಟಿ20 ವಿಶ್ವಕಪ್ ಆಯೋಜನೆಗೊಳ್ಳಲಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಸಿಇಒ ಜಾನಿ ಗ್ರೇವ್ಸ್, “ಟೂರ್ನಿ ನಡೆಯುವ ಎಲ್ಲ ಸ್ಥಳಗಳಲ್ಲೂ ಬೆದರಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಭದ್ರತೆ ನೀಡುವ ಕುರಿತು ಎಲ್ಲ ರಾಷ್ಟ್ರಗಳಿಗೂ ನಾವು ಭರವಸೆ ನೀಡುತ್ತೇವೆ” ಎಂದು ತಿಳಿಸಿದ್ದಾರೆ.
