ಅಕಾಲಿಕ ಮಳೆಯಿಂದಾಗಿ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನ ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ವರ್ಷದ ಮೊದಲ ಮಳೆಯಾಗಿತ್ತು. ಇದೀಗ, ಮೇ 6ರಂದು ನಗರದ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ.
ಮೇ 7ರಂದು ಕೂಡ ಬೆಂಗಳೂರಲ್ಲಿ ಮಳೆ ಹೆಚ್ಚಳವಾಗುವ ಸಂಭವವಿದೆ. ನಗರದಲ್ಲಿ ಕನಿಷ್ಠ ತಾಪಮಾನ 24.0 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 38.0 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಹವಾಮಾನ ಇಲಾಖೆಯು ಮೇ 6ರಂದು ಸಂಜೆಯೊಳಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆಯೇ ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಜತೆಗೆ, ಆನೇಕಲ್ ತಾಲೂಕಿನಾದ್ಯಂತ ಈ ವರ್ಷದ ಮೊದಲ ಮಳೆಯಾಗುತ್ತಿದೆ.
ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜಯನಗರ, ಪ್ರಕಾಶನಗರ, ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ, ಟೌನ್ ಹಾಲ್, ಕಾರ್ಪೋರೇಷನ್, ಮಹಾಲಕ್ಷ್ಮಿಲೇಔಟ್, ಬಸವೇಶ್ವರನಗರದ ಸುತ್ತ ಮುತ್ತ ಭಾರೀ ಮಳೆಯಾಗುತ್ತಿದೆ.
ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವೈಯಾಲಿಕಾವಲ್, ಅರಮನೆ ಮೈದಾನ, ಶೇಷಾದ್ರಿಪುರ, ಯಶವಂತಪುರ ಸುತ್ತಮುತ್ತ ಆಲಿಕಲ್ಲು ಮಳೆಯಾಗುತ್ತಿದೆ.
ಬೆಂಗಳೂರು ಹೊರವಲಯದ ಆನೇಕಲ್ ಸುತ್ತಮುತ್ತ ಕೂಡ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ವಣಕನಹಳ್ಳಿ, ಸೋಲೂರು ಗೊಮ್ಮಾಳಾಪುರ, ಭಾಗದಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಆನೇಕಲ್ ಅತ್ತಿಬೆಲೆ ಚಂದಾಪುರ ಜಿಗಣಿ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಮಳೆಯಾಗುತ್ತಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಎಐ) ಪ್ರದೇಶದಲ್ಲಿ ಮಧ್ಯಾಹ್ನ ನಂತರ ಮಳೆಯ ಸಿಂಚನ ಶುರುವಾಯಿತು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಬೇಕು; ಇಲ್ಲದಿದ್ದರೆ, ಕೃತ್ಯವನ್ನು ಮುಂದುವರೆಸುತ್ತಾರೆ: ಸಂತ್ರಸ್ತೆಯ ಸಹೋದರಿ
ರಾಜ್ಯದಲ್ಲಿ ಈ ಬಾರಿಯ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದ್ದು, ಸಂಭವಿಸಬಹುದಾದ ಹಾನಿಯನ್ನು ತಪ್ಪಿಸಲು ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಬೇಕೆಂದು ಕಂದಾಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೆಂಗಳೂರು ಹೊರೆತುಪಡಿಸಿ 8 ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಮೇತ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ಮೈಸೂರು, ಹುಣಸೂರು, ಕೊಡಗು, ಕೆ.ಆರ್.ನಗರ, ಹಾಸನ, ಮಂಡ್ಯ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ.
ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರು ಸದ್ಯ ಆಗಾಗ ಬರುತ್ತಿರುವ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.