ಅಮೆರಿಕ ಮೂಲದ ನಿಷೇಧಿತ ಖಲಿಸ್ತಾನ್ ಗುಂಪಿನ ‘ಸಿಖ್ಖರಿಗೆ ನ್ಯಾಯ’ ಚಳುವಳಿಯ ಸಂಘಟನೆಯಿಂದ ಹಣಕಾಸು ನೆರವು ಸ್ವೀಕರಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಎಎಪಿ ಸರ್ಕಾರದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಶಿಫಾರಸ್ಸು ಮಾಡಿದ್ದಾರೆ.
1993 ದೆಹಲಿ ಸ್ಫೋಟಗಳ ಆರೋಪಿ ಹಾಗೂ ಭಯೋತ್ಪಾದಕ ದೇವೇಂದ್ರ ಪಾಲ್ ಬುಲ್ಲರ್ ಬಿಡುಗಡೆ ಹಾಗೂ ಖಲಿಸ್ತಾನ ಪರ ಭಾವನೆಗಳನ್ನು ಪ್ರತಿಪಾದಿಸಲು ಖಲಿಸ್ತಾನ್ ಪರ ಗುಂಪುಗಳಿಂದ 16 ಮಿಲಿಯನ್ ಡಾಲರ್ ಹಣ ಸ್ವೀಕರಿಸಿರುವ ಬಗ್ಗೆ ಸಕ್ಸೇನಾ ಅವರು ದೂರು ಸ್ವೀಕರಿಸಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ನಿಷೇಧಿತ ಗುಂಪುಗಳಿಂದ ರಾಜಕೀಯ ಹಣ ಸಹಾಯ ಸಂಬಂಧ ದೂರು ನೀಡಲಾಗಿದೆ. ದೂರುದಾರರು ಸೇರಿಸಿರುವ ವಿದ್ಯುನ್ಯಾನ ಪುರಾವೆಗಳಿಗೆ ಫಾರೆನ್ಸಿಕ್ ಪರೀಕ್ಷೆ ಒಳಗೊಂಡ ತನಿಖೆಯ ಅಗತ್ಯವಿದೆ ಎಂದು ಲೆಫ್ಟಿನೆಂಟ್ ಗನರ್ನರ್ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು 2014ರ ಜನವರಿಯಲ್ಲಿ ಇಕ್ಬಾಲ್ ಸಿಂಗ್ ಎಂಬುವವರಿಗೆ ಬರೆದಿದ್ದ ಪತ್ರ ಹಾಗೂ ದೇವೇಂದ್ರ ಪಾಲ್ ಬುಲ್ಲರ್ ಎಂಬುವವರನ್ನು ಬಿಡುಗಡೆ ಕೋರಿ ಎಎಪಿ ಸರ್ಕಾರ ರಾಷ್ಟ್ರಪತಿಗೆ ಶಿಫಾರಸ್ಸು ಒಳಗೊಂಡ ವಿಷಯಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ಅವರು ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ
ಬುಲ್ಲರ್ ಬಿಡುಗಡೆ ಸಂಬಂಧ ಇಕ್ಬಾಲ್ ಸಿಂಗ್ ಜಂತರ್ ಮಂತರ್‌ನಲ್ಲಿ ಉಪವಾಸ ಕುಳಿತ್ತಿದ್ದರು. ಆಗ ಉಪವಾಸ ನಿಲ್ಲಿಸುವಂತೆ ಕೇಜ್ರಿವಾಲ್ ಪತ್ರ ಬರೆದಿದ್ದರು ಎಂದು ಸಕ್ಸೇನಾ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಏಪ್ರಿಲ್ 1ರಿಂದ ತಿಹಾರ್ ಸೆರೆಮನೆಯಲ್ಲಿದ್ದಾರೆ.
