ಬಹುಸಂಖ್ಯಾತರಿರುವ ದೇಶದಲ್ಲಿ ನಾಲ್ಕೆದು ಜನ ಕಾರ್ಪೋರೇಟ್ ಜನರ ಕೂಲಿ, ಜೀತದಾಳನ್ನಾಗಿಸುವ ಶಕ್ತಿಯನ್ನು ಹಿಮ್ಮೆಟ್ಟಿಸಿ ವಾಸ್ತವ ವಿಷಯ ತಿಳಿದು ಮತ ನೀಡಬೇಕಾದ ಅವಶ್ಯಕತೆಯಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ರಾಯಚೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಎದ್ದೇಳು ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ದೇಶದಲ್ಲಿ ಡಾ ಬಿ ಆರ್ ಅಂಬೇಡ್ಕರ್ ನೀಡಿರುವ ಸಂವಿಧಾನ ಆಶಯಗಳು ಉಳಿಯಬೇಕಾದರೆ ಜನರ ಬದುಕು ರೂಪಿಸುವ ಆಧಾರ ಅವಶ್ಯಕವಾಗಿದೆಯೇ ಹೊರತು ಕಟ್ಟುಕಥೆಗಳಿಂದಲ್ಲ. ಎಲ್ಲ ಜಾತಿಯ ರೈತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಶೇ.70ರಷ್ಟು ಬಹುಸಂಖ್ಯಾತರಿದ್ದಾರೆ. ಕೆಲವೇ ಕೆಲವರ ಹಿತಕ್ಕಾಗಿ ವ್ಯವಸ್ಥೆ ರೂಪಿತವಾಗಬಾರದು. ಕೇಂದ್ರ ಸರ್ಕಾರ ಶೇ.65ರಷ್ಟು ಮತ್ತು ರಾಜ್ಯ ಸರ್ಕಾರ ಶೇ.35ರಷ್ಟು ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಸರ್ಕಾರ ರಾಜ್ಯಗಳ ಸಮಾನ ಆಭಿವೃದ್ದಿ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ” ಎಂದರು.
“ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ರಾಜ್ಯದ ಪಾಲಿನ ಅನುದಾನ ಹಂಚಿಕೆ ಅನ್ಯಾಯದ ಕುರಿತು ವಿವರಿಸಿ, ತೆರಿಗೆ ಹಣವೂ ಸೇರಿದಂತೆ ರಾಜಕ್ಕೆ ಸಾವಿರ ಕೋಟಿ ರೂ. ಕೇಂದ್ರ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಆದರೆ ಯಾವುದೇ ಹಣ ಬಾಕಿಯಿಲ್ಲವೆಂದು ಸುಳ್ಳು ಹೇಳುತ್ತಿದೆ” ಎಂದರು.

“ಸಂವಿಧಾನ ಆಶಯದಂತೆ ಜನರಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳ್ಳುಸುವ ಬಹುದೊಡ್ಡ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಅವಲಂಬಿತಗೊಂಡಿದೆ. ಆದರೆ ಸಂವಿಧಾನ ಬದ್ಧವಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ತೆರಿಗೆಯನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡದೆ ತೀವ್ರ ಅನ್ಯಾಯ ಮಾಡಿದೆ” ಎಂದು ವಾಗ್ದಾಳಿ ನಡೆಸಿದರು.
“ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಮುಂದುವರಿಸುತ್ತದೆ. ಅವರ ಕಪಿಮುಷ್ಟಿಯಾಗಿ ಕೆಲಸ ಮಾಡುವ ದುಃಸ್ಥಿತಿ ಎದುರಾಗಿದೆ. ದೇಶದ ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರ ಬಿಜೆಪಿ ಸರ್ಕಾರದ ಹಿಡಿತದಲ್ಲಿ ಇರಬೇಕು. ಅದು ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಬಿಜೆಪಿ ಸರ್ಕಾರದ ಉದ್ದೇಶ. ಕಳೆದ ವರ್ಷದ ಅವಧಿಯಲ್ಲಿ ದೇಶದ ಬಡವರು ಶ್ರಮಿಕರು ಮತ್ತು ದುಡಿಯುವ ವರ್ಗದ ಜನರ ಪಾಲು ಶ್ರೀಮಂತರ ಜೇಬಿಗೆ ಸೇರುತ್ತದೆ. ಅದರಲ್ಲಿ ರೈತರ ಪಾಲೂ ಇದೆ” ಎಂದರು.
“ಕೇಂದ್ರ ಬಿಜೆಪಿ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಆದರೆ, ʼಕಾಂಗ್ರೆಸ್ ಪಕ್ಷದಲ್ಲಿ ಸಂಸ್ಕೃತಿ ಇಲ್ಲ. ರೈತರ ಹೋರಾಟಗಳನ್ನು ಬೆಂಬಲಿಸುತ್ತೇವೆ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆʼ ಎಂದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಬಹುದೊಡ್ಡ ಸವಾಲು ಎದುರಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಭತ್ತದ ಗದ್ದೆಗೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್; 40ಕ್ಕೂ ಅಧಿಕ ಮಂದಿಗೆ ಗಾಯ
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್, ಪದ್ಮಾವತಿ, ರೈತ ಮುಖಂಡರು, ದಲಿತಪರ ಮುಖಂಡರು, ಎದ್ದೇಳು ಕರ್ನಾಟಕ ಸಂಘಟನೆಯ ಕುಮಾರ ಸಮತಳ, ಮಾರೆಪ್ಪ ಹರವಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ
