ಬೆಂಗಳೂರು ಪೊಲೀಸರು ವ್ಹಿಲೀಂಗ್ ಮಾಡುವ ಅಪಾಯದ ಬಗ್ಗೆ ನಿತ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ವ್ಹಿಲೀಂಗ್ ಮಾಡಬೇಡಿ ಎಂದು ಎಷ್ಟೇ ಹೇಳಿದರೂ ಪುಂಡರ ಪುಂಡಾಟಿಕೆ ಮುಂದುವರೆದಿದೆ. ಹೆದ್ದಾರಿ, ಪ್ರಮುಖ ರಸ್ತೆ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿಯೂ ಕೂಡ ವ್ಹಿಲೀಂಗ್ ಮಾಡುತ್ತಿದ್ದಾರೆ. ಇದೀಗ, ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಉತ್ತರ ವಿಭಾಗದ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ವ್ಹಿಲೀಂಗ್ ಮಾಡುತ್ತಿದ್ದ 14 ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ದೂರಿನ ಆಧಾರದ ಮೇಲೆ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
ಸಂಚಾರ ಉತ್ತರ ವಿಭಾಗದ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರಿಂಗ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಯ ಬಾಷ್ಯಂ ಸರ್ಕಲ್, ಕೆ.ಎಲ್.ಇ ಕಾಲೇಜ್ ಮುಂಭಾಗ, ಮೆಟ್ರೋ ನಿಲ್ದಾಣ ಬಳಿ, ಮುತ್ಯಾಲಮ್ಮ ದೇವಾಲಯ ಮುಂಭಾಗ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಇನ್ನಿತರೆ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಸಾರ್ವಜನಿಕ ಆಸ್ತಿಗೆ ತೊಂದರೆ ಉಂಟಾಗುವಂತೆ ವಾಹನಗಳನ್ನು ಚಲಾಯಿಸಿ ವ್ಹಿಲೀಂಗ್ ಮಾಡುತ್ತಿದ್ದವರ ವಿರುದ್ಧ ಜನವರಿ 1ರಿಂದ ಮೇ 6 ರವರೆಗೆ ಒಟ್ಟು 14 ವ್ಹಿಲೀಂಗ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಮಾಹಿತಿ ನೀಡಿದೆ.
ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಮತ್ತು ಸಾರ್ವಜನಿಕ ಆಸ್ತಿಗೆ ತೊಂದರೆ ಉಂಟಾಗುವಂತೆ ವಾಹನಗಳನ್ನು ವ್ಹೀಲಿಂಗ ಮಾಡುತ್ತಿದ್ದವರ ವಿರುದ್ಧ ಒಟ್ಟು 14 ಪ್ರಕರಣಗಳನ್ನು ದಾಖಲಿಸಿ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುತ್ತದೆ. @blrcitytraffic @Jointcptraffic pic.twitter.com/uSbaV8CeFr
— DCP Traffic North, Bengaluru (@DCPTrNorthBCP) May 6, 2024
ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 12 ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಈ ಪೈಕಿ ಇಬ್ಬರು ಬಾಲಕರು ಬೈಕ್ ವ್ಹಿಲೀಂಗ್ ಮಾಡುತ್ತಿದ್ದು, ಈ ಹಿನ್ನೆಲೆ, ವಾಹನದ ಮಾಲೀಕ ಅಥವಾ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. 5 ಡಿಎಲ್ ಅಮಾನತ್ತು ಪಡಿಸಲು ಸಂಬಂಧಪಟ್ಟ ಆರ್‌ಟಿಓ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ಷದ ಮೊದಲ ಮಳೆ; ರಸ್ತೆಗಳು ಜಲಾವೃತ, ನೆಲಕ್ಕೊರಗಿದ ಮರಗಳು, ಸಂಚಾರ ಅಸ್ತವ್ಯಸ್ತ
“ಐದು ಡ್ರೈವಿಂಗ್ ಲೈಸೆನ್ಸ್‌ಗಳನ್ನು ವಶಪಡಿಸಿಕೊಂಡು ಅಮಾನತಿಗೆ ಶಿಫಾರಸು ಮಾಡಿ ಸಂಬಂಧಪಟ್ಟ ಆರ್‌ಟಿಒ ಅಧಿಕಾರಿಗಳಿಗೆ ಕಳುಹಿಸಲಾಗಿದೆ” ಎಂದು ಉತ್ತರ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಸಿರಿ ಗೌರಿ ಡಿ.ಆರ್ ಹೇಳಿದ್ದಾರೆ.
“ಈ ರೀತಿ ಸಾಮಾಜಿಕ ಶಾಂತಿಯ ಭಂಗಕ್ಕೆ ಕಾರಣರಾಗುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಮುಂದಿನ ದಿನಗಳಲ್ಲಿಯೂ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ಅವರ ನೇತೃತ್ವದಲ್ಲಿ ಠಾಣಾವಾರು ತಂಡವನ್ನು ರಚಿಸಿಕೊಂಡು ಕ್ರಮ ಕೈಗೊಂಡಿದೆ.