ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು ಜಾಮೀನು ನೀಡಲಿಲ್ಲ. ವಿಚಾರಣೆಯನ್ನು ಕೋರ್ಟ್ ನಾಳೆ ಅಥವಾ ಮುಂದಿನ ವಾರ ಕೈಗೊಳ್ಳಲಿದೆ.
ಗೋವಾ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಅವರು 7 ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದು, ಈ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದೆಂದು ಜಾರಿ ನಿರ್ದೇಶನಾಲಯ ಪರ ಹಾಜರಿದ್ದ ಹೆಚ್ಚುವರಿ ಸಾಲಿಟರ್ ಜನರಲ್ ಎಸ್ ವಿ ರಾಜು ಅವರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರಿದ್ದ ಪೀಠವು, ಕೇಜ್ರಿವಾಲ್ ಅವರು ಚುನಾಯಿತ ನಾಯಕನಾಗಿದ್ದು, ಲೋಕಸಭೆಯಲ್ಲಿ ಪ್ರಚಾರ ಮಾಡಲು ಜಮೀನು ಅಗತ್ಯವಿದೆ ಎಂದು ತಿಳಿಸಿದರು.
ಈ ನಡುವೆ ದೆಹಲಿ ಹೈಕೋರ್ಟ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮೇ 20ರವರೆಗೂ ವಿಸ್ತರಿಸಿದೆ.
ಇಂದಿಗೆ ಕೇಜ್ರಿವಾಲ್ ಅವರ ನ್ಯಾಯಾಂಗದ ಅವಧಿ ಕೊನೆಗೊಂಡ ಕಾರಣ ವಿಶೇಷ ನ್ಯಾಯಾಧೀಶರಾದ ಕಾವೇರಿ ಬೇವಾಜ ಅವರು ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದಿಂದ ಮಾರ್ಚ್ 21 ರಂದು ಬಂಧನಕ್ಕೊಳಗಾಗಿದ್ದು, ಏ.1 ರಿಂದ ತಿಹಾರ್ ಸೆರೆಮನೆಯಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ತಮ್ಮ ಬಂಧನದ ಆದೇಶ ಪ್ರಶ್ನಿಸಿ ಜಾಮೀನಿಗಾಗಿ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇಂದು ವಿಚಾರಣೆ ನಡೆಯುತ್ತಿದೆ.
ದೆಹಲಿ ಅಬಕಾರಿ ಹಗರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಕೂಡ ಆರೋಪಿಗಳಾಗಿದ್ದು, ಸಂಜಯ್ ಸಿಂಗ್ ಜಾಮೀನು ಪಡೆದುಕೊಂಡಿದ್ದರೆ, ಮನೀಶ್ ಸಿಸೋಡಿಯಾ ಇನ್ನೂ ಸೆರೆಮನೆಯಲ್ಲಿದ್ದಾರೆ.
ಈ ನಡುವೆ ಅಮೆರಿಕ ಮೂಲದ ನಿಷೇಧಿತ ಖಲಿಸ್ತಾನ್ ಗುಂಪಿನ ‘ಸಿಖ್ಖರಿಗೆ ನ್ಯಾಯ’ ಚಳುವಳಿಯ ಸಂಘಟನೆಯಿಂದ ಹಣಕಾಸು ನೆರವು ಸ್ವೀಕರಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಎಎಪಿ ಸರ್ಕಾರದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಶಿಫಾರಸ್ಸು ಮಾಡಿದ್ದಾರೆ.
