ಉತ್ತರ ಪ್ರದೇಶದಲ್ಲಿ ಪುರುಷನೋರ್ವನ ಮೇಲೆ ಮಹಿಳೆಯೊಬ್ಬರು ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ನ್ಯಾಯಾಲಯವು ತಪ್ಪಿತಸ್ಥ ಮಹಿಳೆಯನ್ನು ದೋಷಿ ಎಂದು ತೀರ್ಪು ನೀಡಿ ಆದೇಶ ಹೊರಡಿಸಿರುವುದ್ದಲ್ಲದೇ, ದಂಡ ಸಹಿತ 1653 ದಿನಗಳ ಜೈಲು ಶಿಕ್ಷೆ ವಿಧಿಸಿದ ಬಗ್ಗೆ ವರದಿಯಾಗಿದೆ.
2018ರಲ್ಲಿ ಅತ್ಯಾಚಾರದ ಆರೋಪದ ಮೇಲೆ ಅಜಯ್ ಕುಮಾರ್ ಎಂಬುವವರ ವಿರುದ್ಧ ಮಹಿಳೆಯೋವರು ಅತ್ಯಾಚಾರ ನಡೆಸಿರುವ ಆರೋಪ ಹೊರಿಸಿ, ದೂರು ನೀಡಿದ್ದರು. ಆದರೆ, ಈ ದೂರಿಗೆ ಬೇಕಾದ ಪುರಾವೆಗಳನ್ನು ಸಲ್ಲಿಸಲು ವಿಫಲವಾದುದನ್ನು ಮನಗಂಡ ನ್ಯಾಯಾಲಯವು ಮಹಿಳೆಯು ಸುಳ್ಳು ದೂರು ದಾಖಲಿಸಿರುವನ್ನು ಗಮನಿಸಿದೆ. ನ್ಯಾಯಾಲಯದಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಸೆಕ್ಷನ್ 195 ಐಪಿಸಿ (ಸುಳ್ಳು ಪುರಾವೆಗಳನ್ನು ನೀಡುವುದು ಅಥವಾ ನಿರ್ಮಿಸುವುದು) ಅಡಿಯಲ್ಲಿ ಮಹಿಳೆಯನ್ನು ದೋಷಿ ಎಂದು ಉತ್ತರ ಪ್ರದೇಶದ ಬರೇಲಿ ಜಿಲ್ಲಾ ನ್ಯಾಯಾಲಯವು ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಜ್ಞಾನೇಂದ್ರ ತ್ರಿಪಾಠಿ ಅವರು ಮಹಿಳೆಗೆ 4 ವರ್ಷ, 6 ತಿಂಗಳು ಮತ್ತು 8 ದಿನಗಳ ಕಾಲ (1,653 ದಿನಗಳು) ಜೈಲು ಶಿಕ್ಷೆ ವಿಧಿಸಿದ್ದಾರೆ. ಇದು ಸುಳ್ಳು ಆರೋಪಕ್ಕೆ ಗುರಿಯಾಗಿದ್ದ ಅಜಯ್ ಕುಮಾರ್ ಅಷ್ಟು ದಿನಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ಅಷ್ಟೇ ದಿನಗಳ ಶಿಕ್ಷೆಯನ್ನು ನ್ಯಾಯಾಧೀಶರು ಮಹಿಳೆಗೂ ವಿಧಿಸಿದ್ದಾರೆ. ಅಲ್ಲದೇ, ಹೆಚ್ಚುವರಿಯಾಗಿ, ದೋಷಿ ಮಹಿಳೆಗೆ ಸುಮಾರು ₹ 5,88,822 ದಂಡ ಕೂಡ ವಿಧಿಸಿರುವ ನ್ಯಾಯಾಧೀಶರು, ದಂಡದ ಮೊತ್ತವನ್ನು ಅಜಯ್ ಕುಮಾರ್ ಅವರಿಗೆ ಪಾವತಿಸುವಂತೆ ತಿಳಿಸಿದ್ದಾರೆ.
ಕೌಶಲ್ಯವಿಲ್ಲದ ಕಾರ್ಮಿಕರಿಗೆ ಉತ್ತರ ಪ್ರದೇಶ ಸರ್ಕಾರ ನಿಗದಿಪಡಿಸಿದ ವೇತನವನ್ನು ಆಧರಿಸಿ ಮೊತ್ತವನ್ನು ಲೆಕ್ಕ ಹಾಕಿ, ಈ ದಂಡ ವಿಧಿಸಲಾಗಿದೆ ಎಂದು ತೀಪು ನೀಡುವಾಗ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.ಈ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯವು, ಈ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಇದು ಅತ್ಯಂತ ಗಂಭೀರ ಪ್ರಕರಣ ಎಂದು ತಿಳಿಸಿದೆ.
“ಮಹಿಳೆಯು ತನ್ನ ರಕ್ಷಣೆಗಾಗಿ ಜಾರಿಗೊಳಿಸಲಾಗಿರುವ ಕಾನೂನನ್ನು ಅಕ್ರಮ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ, ಇದು ಸಮಾಜದಲ್ಲಿ ಪುನರಾವರ್ತನೆಯಾಗಬಾರದು. ಕಾನೂನುಗಳ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಸೂಕ್ತ ಮತ್ತು ನಿರೀಕ್ಷಿತವಾಗಿದ್ದರೂ, ಅನ್ಯಾಯದ ಲಾಭವನ್ನು ಪಡೆಯುವ ಮಹಿಳೆಯರಿಗೆ ಪುರುಷರ ಹಿತಾಸಕ್ತಿಗಳ ಮೇಲೆ ದಾಳಿ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ ಎಂದು ಅರ್ಥವಲ್ಲ” ಎಂದು ನ್ಯಾಯಾಲಯವು ತೀರ್ಪು ನೀಡುವ ವೇಳೆ ತಿಳಿಸಿದೆ.
“ಈ ಪ್ರಕರಣದಲ್ಲಿ ತಪ್ಪಿತಸ್ಥ ಮಹಿಳೆಯ ನಡೆಯಿಂದಾಗಿ ನಿಜವಾದ ಬಲಿಪಶು ಮಹಿಳೆಯರಿಗೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸುಳ್ಳು ದೂರು ನೀಡಿದ ಮಹಿಳೆಗೆ ಶಿಕ್ಷೆ ವಿಧಿಸಲಾಗಿದೆ” ಎಂದು 16 ಪುಟಗಳ ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ಪ್ರಕರಣ | ಎಸ್‌ಐಟಿ ತನಿಖೆಯಲ್ಲಿ ರಾಜ್ಯ ಸರ್ಕಾರ ಸೂಜಿಯಷ್ಟೂ ಮಧ್ಯಪ್ರವೇಶಿಸಲ್ಲ: ಸಿಎಂ ಸಿದ್ದರಾಮಯ್ಯ
ಯಾವುದೇ ಅತ್ಯಾಚಾರ ಅಥವಾ ಅಪಹರಣದ ಅಪರಾಧ ನಡೆಯದಿದ್ದಾಗ ಸಂತ್ರಸ್ತೆ ಮಹಿಳೆಯು ಪುರುಷನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ನ್ಯಾಯಾಲಯವು ಕಂಡು ಹಿಡಿದಿದೆ ಮತ್ತು ಆಕೆಯ ಸುಳ್ಳು ಹೇಳಿಕೆಯಿಂದಾಗಿ, ಪುರುಷನು 4 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಬೇಕಾಗಿತ್ತು ಎಂಬುದನ್ನು ಗಮನಿಸಿತು. ಹೀಗಾಗಿ, ಸುಳ್ಳು ದೂರು ನೀಡಿದ್ದ ಮಹಿಳೆಗೆ 1653 ದಿನಗಳ ಜೈಲು ಶಿಕ್ಷೆ ಮತ್ತು ರೂ. 5.8 ಲಕ್ಷ ದಂಡವನ್ನು ವಿಧಿಸಿದೆ.
