ಹರಿಯಾಣದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದ ನಂತರ ಬಿಜೆಪಿ ಸರ್ಕಾರದಲ್ಲಿ ಬಹುಮತ ಸಂಖ್ಯಾಬಲ ಕುಸಿತಗೊಂಡು ಅಲ್ಪಮತಕ್ಕೆ ಇಳಿದಿದೆ. ಮುಖ್ಯಮಂತ್ರಿ ನಯಾನಿ ಸಿಂಗ್ ಸೈನಿ ಸರ್ಕಾರಕ್ಕೆ ಆತಂಕ ಎದುರಾದ ಕಾರಣ ವಿಪಕ್ಷ ಕಾಂಗ್ರೆಸ್ ಪರಿಸ್ಥಿತಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಕೆಲವು ತಿಂಗಳ ಹಿಂದೆ ರಾಜೀನಾಮೆ ನೀಡಿದ ಪರಿಣಾಮ ನೂತನ ಮುಖ್ಯಮಂತ್ರಿಯಾಗಿ ನಯಾನಿ ಸಿಂಗ್ ಸೈನಿ ಅಧಿಕಾರ ಸ್ವೀಕರಿಸಿದ್ದಾರೆ. ನಿನ್ನೆ ನಡೆದ ಬೆಳವಣಿಗೆಯಲ್ಲಿ ಮೂವರು ಪಕ್ಷೇತರ ಶಾಸಕರಾದ ಸೋಬೀರ್ ಸಂಗ್ವಾನ್, ರಣಧೀರ್ ಸಿಂಗ್ ಗೊಲ್ಲೇನ್ ಹಾಗೂ ಧರ್ಮಪಾಲ್ ಗೊಡೇರ್ ಬಿಜೆಪಿ ಸರ್ಕಾರದಿಂದ ತಮ್ಮ ಬೆಂಬಲ ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದರು.
ಈ ಮೂವರು ಶಾಸಕರು ವಿಪಕ್ಷ ನಾಯಕ ಭೂಪೇಂದರ್ ಸಿಂಗ್ ಹೂಡ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರೊಂದಿಗಿದ್ದು, ಕೈ ಪಕ್ಷಕ್ಕೆ ನಿಷ್ಠೆ ತೋರಿದ್ದಾರೆ. ಪಕ್ಷೇತರರು ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ನಂತರ ಮಾತನಾಡಿದ ಭೂಪೇಂದರ್ ಸಿಂಗ್ ಹೂಡ, ಬಹುಮತ ಕಳೆದುಕೊಂಡಿರುವ ಬಿಜೆಪಿ ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಚುನಾವಣೆ ನಡೆಸಬೇಕು. ಇದು ಜನವಿರೋಧಿ ಸರ್ಕಾರ” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಕನ್ನಡಿಗ ಕ್ರಿಕೆಟರ್‌ಗೆ ಸ್ಥಾನ
ಈ ನಡುವೆ ಬಿಜೆಪಿ ಮಾಜಿ ಮೈತ್ರಿ ಪಕ್ಷವಾಗಿರುವ ಜನನಾಯಕ ಜನತಾ ಪಕ್ಷ(ಜೆಜೆಪಿ) ತಮ್ಮ ಬೆಂಬಲವನ್ನು ಕಾಂಗ್ರೆಸ್‌ಗೆ ನೀಡುವುದಾಗಿ ತಿಳಿಸಿದೆ. ಜೆಜೆಪಿ ನಾಯಕ ಹಾಗೂ ಮಾಜಿ ಡಿಸಿಎಂ ದುಷ್ಯಂತ್ ಚೌತಾಲಾ ಅವರು ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ. ತಾವು ನಮ್ಮ ಬೆಂಬಲವನ್ನು ಸರ್ಕಾರದಿಂದ ವಾಪಸ್ ಪಡೆದಿದ್ದು, ಕಾಂಗ್ರೆಸ್ ತನ್ನ ಮುಂದಿನ ನಡೆಯನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ಸರ್ಕಾರದ ಸಂಖ್ಯಾಬಲ ಎಷ್ಟಿದೆ
ಒಟ್ಟು 90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರಿದ್ದಾರೆ. ಬಹುಮತ ಸಂಖ್ಯೆಗೆ 45 ಸದಸ್ಯರ ಬೆಂಬಲ ಬೇಕು. ಆಡಳಿತರೂಢ ಬಿಜೆಪಿ ಸರ್ಕಾರ 40 ಬಿಜೆಪಿ ಶಾಸಕರೊಂದಿಗೆ 6 ಪಕ್ಷೇತರ ಶಾಸಕರಿದ್ದರು. ಈಗ ಮೂವರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರದ ಸಂಖ್ಯಾಬಲ 43ಕ್ಕೆ ಕುಸಿದಿದೆ. ವಿಪಕ್ಷ ಕಾಂಗ್ರೆಸ್‌ನ 30 ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲ ಹೊಂದಿದೆ.
ಬಿಜೆಪಿ ಮೈತ್ರಿಯಿಂದ ಹೊರ ಬಂದು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದಿರುವ ಜೆಜೆಪಿ 10 ಶಾಸಕರನ್ನು ಹೊಂದಿದೆ. ಈ ಸಂಖ್ಯಾಬಲವನ್ನು ಕೂಡಿದರೆ ಒಟ್ಟು ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 43 ಆಗಲಿದೆ. ಮ್ಯಾಜಿಕ್ ಸಂಖ್ಯೆ ಪಡೆಯಲು ಇವರಿಗೂ ಇಬ್ಬರು ಶಾಸಕರ ಕೊರತೆ ಎದುರಾಗಲಿದೆ. ಇನ್ನುಳಿದಂತೆ ಐಎನ್‌ಎಲ್‌ಡಿ ಹಾಗೂ ಹೆಚ್‌ಎಲ್‌ಪಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
