ಹರಿಯಾಣದ ಹಿಸಾರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕದನಕ್ಕೆ ವೇದಿಕೆ ಸಜ್ಜಾಗಿದ್ದು, ಈ ಕ್ಷೇತ್ರದಲ್ಲಿ ಮಾವ, ಸೊಸೆಯಂದಿರು ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಭಾವಿ ಚೌತಾಲಾ ಕುಟುಂಬದ ಮೂವರು ಸದಸ್ಯರು ರಾಜಕೀಯವಾಗಿ ಬೇರ್ಪಟ್ಟಿದ್ದು ಪರಸ್ಪರರ ವಿರುದ್ಧ ಕಣಕ್ಕೆ ಇಳಿದಿದ್ದಾರೆ.
ಶಾಸಕಿ ನೈನಾ ಚೌತಾಲಾ ಜನನಾಯಕ ಜನತಾ ಪಕ್ಷದಿಂದ (ಜೆಜೆಪಿ), ಸುನೈನಾ ಚೌತಾಲಾ ಇಂಡಿಯನ್ ನ್ಯಾಷನಲ್ ಲೋಕ ದಳದಿಂದ (ಐಎನ್‌ಎಲ್‌ಡಿ) ಮತ್ತು ಈ ಇಬ್ಬರು ಹೆಂಗಳೆಯರ ಮಾವ ರಂಜಿತ್ ಸಿಂಗ್ ಚೌತಾಲಾ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.
ಸುನೈನಾ ಚೌತಾಲಾ ಮತ್ತು ನೈನಾ ಚೌತಾಲಾ ಅವರ ಮಾವಂದಿರ ಸಹೋದರ ರಂಜಿತ್ ಚೌತಾಲಾ ಆಗಿದ್ದು, ಈಗ ಮಾವ ಮತ್ತು ಸೊಸೆಯಂದಿರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿರುವ ಹಿರಿಯ ನಾಯಕ ಜೈ ಪ್ರಕಾಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಕಾಂಗ್ರೆಸ್ ಅನ್ನು ಹಾಡಿ ಹೊಗಳಿ ಬಿಜೆಪಿಯನ್ನು ತೆಗಳಿದ ಚಕ್ರವರ್ತಿ ಸೂಲಿಬೆಲೆ!
57 ವರ್ಷದ ನೈನಾ ಚೌತಾಲಾ ಅವರು ಜೆಜೆಪಿ ಮುಖ್ಯಸ್ಥ ಅಜಯ್ ಸಿಂಗ್ ಚೌಟಾಲಾ ಅವರ ಪತ್ನಿ ಮತ್ತು ಹರಿಯಾಣದ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ತಾಯಿಯಾಗಿದ್ದಾರೆ.
ಇನ್ನು ಐಎನ್‌ಎಲ್‌ಡಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ 47 ವರ್ಷದ ಸುನೈನಾ ಚೌತಾಲಾ ಐಎನ್‌ಎಲ್‌ಡಿಯ ನಾಯಕ ಅಭಯ್ ಸಿಂಗ್ ಚೌತಾಲಾ ಅವರ ಸೋದರ ಸಂಬಂಧಿ ರವಿ ಚೌತಾಲಾ ಅವರ ಪತ್ನಿಯಾಗಿದ್ದಾರೆ.
2019 ರ ವಿಧಾನಸಭಾ ಚುನಾವಣೆಯ ನಂತರ ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ 2024ರ ಮಾರ್ಚ್ ತಿಂಗಳಿನಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿ ನಯಾಬ್ ಸಿಂಗ್ ಸೈನಿ ನೇತೃತ್ವದ ಹೊಸ ಬಿಜೆಪಿ ಸರ್ಕಾರ ರಚನೆಯಾದಾಗ ಈ ಮೈತ್ರಿಯು ಮುರಿದು ಬಿದ್ದಿದೆ.
78 ವರ್ಷದ ರಂಜಿತ್ ಚೌತಾಲಾ ಅವರು ಮಾರ್ಚ್‌ನಲ್ಲಿ ಸಿರ್ಸಾ ಜಿಲ್ಲೆಯ ರಾನಿಯಾದ ಸ್ವತಂತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಾದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈಗ ಹಿಸಾರ್ ಲೋಕಸಭೆ ಕ್ಷೇತ್ರದ ಟಿಕೆಟ್‌ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅವರು ಸಚಿವರಾಗಿ ಮುಂದುವರಿದಿದ್ದಾರೆ.