ಮೀಸಲಾತಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯುಳ್ಳು ಮತ್ತು ದ್ವೇಷಪೂರಿತ ವಿಡಿಯೋ ತುಣುಕನ್ನು ಬಿಜೆಪಿ ರಾಜ್ಯ ಘಟಕದ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡು ಕೋಮು ದ್ವೇಷ ಹರಡಲು ಯತ್ನಿಸಿದ ಆರೋಪದ ಮೇಲೆ ಕರ್ನಾಟಕ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಬಿಜೆಪಿ ಐಟಿ ಎಲ್ ವಿರುದ್ಧ ಇತ್ತೀಚೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಪ್ರಶಾಂತ್ ಮಕನೂರು ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಶಾಂತ್ ಮಕನೂರ್ ಅವರು ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
#BREAKING #Karnataka IT cell head Prashanth Makanoor has been picked up by high ground police in #Bangalore over the controversial video. pic.twitter.com/AJhiLU2LMf
— Imran Khan (@KeypadGuerilla) May 9, 2024
ಜೆಪಿ ನಡ್ಡಾ, ವಿಜಯೇಂದ್ರ, ಅಮಿತ್ ಮಾಳವೀಯಾಗೆ ನೋಟಿಸ್
ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ವರ್ಗಗಳ ನಡುವೆ ದ್ವೇಷ ಮತ್ತು ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ , ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅಮಿತ್ ಮಾಳವೀಯಾಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು.
ಏನಿದು ಪ್ರಕರಣ?
ಮೇ 4ರಂದು ಸಾಯಂಕಾಲ 5.34 ಗಂಟೆಗೆ ಭಾರತೀಯ ಜನತಾ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣ @bjp4karnataka ಗೆ ಸೇರಿದ “ಎಕ್ಸ್” ಖಾತೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸೂಚನೆಯಂತೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾರವರು ‘ಎಚ್ಚರ..ಎಚ್ಚರ..ಎಚ್ಚರ’ ಎಂಬ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸಮಾಜದಲ್ಲಿ ವರ್ಗಗಳ ನಡುವೆ ದ್ವೇಷ ಮತ್ತು ವೈಮನಸ್ಸು ಉಂಟುಮಾಡಿ, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ರೀತಿಯಲ್ಲಿದೆ. ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ವರ್ಗಗಳ ಮದ್ಯೆ ದ್ವೇಷ ಮತ್ತು ವೈಮನಸ್ಸನ್ನು ಸೃಷ್ಟಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ರಮೇಶ್ ಬಾಬು ಅವರು ಮೇ 5 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬುಟ್ಟಿಗೆ ಮುಸ್ಲಿಂ ಮೊಟ್ಟೆಯನ್ನು ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಂದಿರಿಸಿದ್ದಾರೆ. ಮರಿಯಾವ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಮರಿಗಳಿಗೆ ಮಾತ್ರ ನೀಡುತ್ತಾರೆ…” ಎಂಬ ಹೇಳಿಕೆ ಇರುವ ವಿಡಿಯೊ ತುಣುಕನ್ನು ಬಿಜೆಪಿ ರಾಜ್ಯ ಘಟಕದ ‘ಎಕ್ಸ್‘ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.
ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ‘ಮಾಳವೀಯ, ನಡ್ಡಾ ಮತ್ತು ವಿಜಯೇಂದ್ರ ಇಂತಹ ವಿಡಿಯೊ ಪ್ರಸಾರದ ಮೂಲಕ ಸಮುದಾಯಗಳ ಮಧ್ಯೆ ದ್ವೇಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.
ಜೆ.ಪಿ ನಡ್ಡಾ, ಬಿ.ವೈ ವಿಜಯೇಂದ್ರ ಮತ್ತು ಅಮಿತ್ ಮಾಳವಿಯಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಸ್ವೀಕರಿಸಲಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು.
ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಈ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಮೂವರು ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
