ವಿಚಾರವಾದಿ, ಸಾಮಾಜಿಕ ಕಾರ್ಯಕರ್ತರಾದ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ ಪುಣೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನಾ ಸಮಿತಿಯ ಮುಖ್ಯಸ್ಥರಾಗಿದ್ದ ನರೇಂದ್ರ ದಾಬೋಲ್ಕರ್ ಅವರನ್ನು 2013ರ, ಆಗಸ್ಟ್ 20 ರಂದು ಪುಣೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಹಂತಕರಾದ ಸಚಿನ್ ಅನ್‌ದುರೆ ಹಾಗೂ ಶರತ್ ಕಾಲಾಸ್ಕರ್ ಅವರನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜೊತೆಗೆ 5 ಲಕ್ಷ ರೂ. ದಂಡ ವಿಧಿಸಿತು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ವೀರೇಂದ್ರ ಸಿಂಗ್ ತಾವ್ಡೆ, ವಿಕ್ರಮ್ ಭಾವೆ ಹಾಗೂ ಸಂಜೀವ್ ಪುನಾಲೇಖರ್ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿತು.
ವಿಚಾರಣೆಯಲ್ಲಿ ಸರ್ಕಾರಿ ಪರ ವಕೀಲರು 20 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದರೆ, ಆರೋಪಿ ಪರ ವಕೀಲರು ಇಬ್ಬರು ಸಾಕ್ಷಿಗಳನ್ನು ವಿಚಾರಣೆಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
ಹಂತಕರು ದಾಬೋಲ್ಕರ್ ಅವರ ಮೂಢನಂಬಿಕೆ ವಿರೋಧಿ ಹೋರಾಟವನ್ನು ವಿರೋಧಿಸಿದ್ದರು ಎಂಬುದು ಸರ್ಕಾರಿ ಪರ ವಕೀಲರ ಅಂತಿಮ ವಿಚಾರಣೆಯಲ್ಲಿ ತಿಳಿದುಬಂತು.
ನರೇಂದ್ರ ದಾಬೋಲ್ಕರ್ ಹತ್ಯೆಯನ್ನು ಆರಂಭದಲ್ಲಿ ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. 2014ರಲ್ಲಿ ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ತನಿಖೆಯನ್ನು ವಹಿಸಲಾಯಿತು.
ದಾಬೋಲ್ಕರ್ ರೀತಿಯಲ್ಲಿಯೇ, 2015ರಲ್ಲಿ ಗೋವಿಂದ್ ಪನ್ಸಾರೆ, ಕರ್ನಾಟಕದಲ್ಲಿ ಎಂ ಎಂ ಕಲಬುರ್ಗಿ ಗಹಾಗೂ 2017ರಲ್ಲಿ ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು.
