ಅಕ್ಬರ್‌ಪುರ ನಗರದ ಹೆಸರನ್ನು ಉಚ್ಚರಿಸುವುದರಿಂದ ಬಾಯಿಗೆ ಕೆಟ್ಟ ರುಚಿ ಬರುತ್ತದೆ. ಖಚಿತವಾಗಿರಿ, ಇವೆಲ್ಲವೂ ಬದಲಾಗುತ್ತವೆ. ನಾವು ನಮ್ಮ ರಾಷ್ಟ್ರದಿಂದ ವಸಾಹತುಶಾಹಿಯ ಎಲ್ಲ ಕುರುಕುಗಳನ್ನು ತೊಡೆದುಹಾಕಬೇಕು ಮತ್ತು ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆ ಮೂಲಕ, ಆ ರಾಜ್ಯದಲ್ಲಿ ಮತ್ತೆ ಹೆಸರು ಬದಲಾವಣೆ ನಡೆಸುವ ಸುಳಿವು ನೀಡಿದ್ದಾರೆ.
ಮುಸ್ಲಿಮರ ವಿರುದ್ಧದ ದ್ವೇಷ ಬಿತ್ತುತ್ತಲೇ ಬಿಜೆಪಿ ರಾಜಕೀಯ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಕೋಮು ಆಡಳಿತ ನಡೆಸುತ್ತಿದ್ದಾರೆ. ಈ ಹಿಂದೆ, ಅಲ್ಲಿನ ಎಲ್ಲ ಸರ್ಕಾರಿ ಕಟ್ಟಡಗಳಿಗೂ ಕೇಸರಿ ಬಣ್ಣ ಬಳಿಸಿದ್ದ ಯೋಗಿ, ಹಲವಾರು ನಗರಗಳ ಹೆಸರನ್ನೂ ಬದಲಿಸಿದ್ದರು. ಇದೀಗ, ಮತ್ತೆ ಹೆಸರು ಬದಲಾವಣೆಯ ಸೂಚನೆ ನೀಡಿದ್ದಾರೆ. ಅಕ್ಬರ್‌ಪುರವನ್ನು ಅಕ್ಷರಪುರವೆಂದು ಬದಲಿಸುವ ಮಾತನಾಡಿದ್ದಾರೆ.
ಅಕ್ಬರ್‌ಪುರದ ಆಚೆಗೆ, ಅಲಿಗಢ್, ಅಜಮ್‌ಗಢ್, ಷಹಜಹಾನ್‌ಪುರ, ಗಾಜಿಯಾಬಾದ್, ಫಿರೋಜಾಬಾದ್, ಫರೂಕಾಬಾದ್ ಮತ್ತು ಮೊರಾದಾಬಾದ್ ಸೇರಿದಂತೆ ರಾಜ್ಯದೊಳಗಿನ ಹಲವಾರು ಜಿಲ್ಲೆಗಳ ಹೆಸರನ್ನು ಬದಲಾಯಿಸಲು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ರಾಜ್ಯದಲ್ಲಿ ಹಲವಾರು ರಸ್ತೆಗಳು, ಉದ್ಯಾನವನಗಳು ಮತ್ತು ಕಟ್ಟಡಗಳಿಗೆ ವಾಯಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು.
ಹೆಚ್ಚುವರಿಯಾಗಿ, ದೇಶದ ನಾಲ್ಕನೇ ಜನನಿಬಿಡ ಜಂಕ್ಷನ್ ಆಗಿರುವ ಐಕಾನಿಕ್ ಮುಘಲ್ಸರಾಯ್ ರೈಲು ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಿಸಲಾಗಿತ್ತು.
2019ರ ಕುಂಭಮೇಳಕ್ಕೆ ಮುನ್ನ, ಅಲಹಾಬಾದ್‌ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು.
ಇತ್ತೀಚೆಗೆ, ಅಲಿಗಢ ನಗರವನ್ನು ಹರಿಗಢ ಎಂದು ಮರುನಾಮಕರಣ ಮಾಡಬೇಕೆಂದು ಅಲ್ಲಿನ ಪಾಲಿಕೆ ಒತ್ತಾಯಿಸಿ, ನಿರ್ಣಯವನ್ನು ಅಂಗೀಕರಿಸಿದೆ. ಅಲ್ಲದೆ, ಫಿರೋಜಾಬಾದ್ ಅನ್ನು ಚಂದ್ರನಗರ ಎಂದು, ಮೈನ್‌ಪುರಿಯನ್ನು ಮಾಯಾಪುರಿ ಎಂದು ಮರುನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸಲಾಗಿದೆ.
ಉತ್ತರ ಪ್ರದೇಶ ಪ್ರೌಢ ಶಿಕ್ಷಣ ರಾಜ್ಯ ಸಚಿವೆ ಗುಲಾಬ್ ದೇವಿ ಅವರು ತಮ್ಮ ತವರು ಜಿಲ್ಲೆ ಸಂಭಾಲ್ ಹೆಸರನ್ನು ಪೃಥ್ವಿರಾಜ್ ನಗರ ಅಥವಾ ಕಲ್ಕಿ ನಗರ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕಿ ದೇವಮಣಿ ದ್ವಿವೇದಿ ಅವರು ಸುಲ್ತಾನ್‌ಪುರ ಜಿಲ್ಲೆಯ ಹೆಸರನ್ನು ಕುಶಭವನಪುರ ಎಂದು ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ. ಸಹರಾನ್‌ಪುರದ ದಿಯೋಬಂದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬ್ರಜೇಶ್ ಸಿಂಗ್ ಕೂಡ ದೇವ್ಬಂದ್ ಅನ್ನು ದೇವವೃಂದವೆಂದು ಮರುನಾಮಕರಣ ಮಾಡಲು ಒತ್ತಾಯಿಸಿದ್ದಾರೆ.