ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರಳನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, “ಈ ವಸತಿ ಶಾಲೆಗಳ ಇನ್ನಷ್ಟು ಮಕ್ಕಳು ರ್‍ಯಾಂಕ್ ಪಡೆಯಬೇಕು; ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು” ಎಂದು ಆಶಿಸಿದರು.
ಮೈಸೂರಿನಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, “ಅಂಕಿತಾಳ ಸಾಧನೆ ಹರ್ಷ ತಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯ ಉದ್ದೇಶವೇ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೂಡ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು” ಎಂದರು.
“1994ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಹೆಂಡದಂಗಡಿ, ಸಾರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು ಎಂಬುದು ದಲಿತ ಹೋರಾಟದ, ದಲಿತ ಸಂಘರ್ಷ ಸಮಿತಿಯವರ ಘೋಷಣೆಯಾಗಿತ್ತು. ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕಾರಣ ಮತ್ತು ನಾನು ಕೂಡ ಗ್ರಾಮೀಣ ಪ್ರದೇಶದಿಂದ ಬಂದವನಾದ್ದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಮೊರಾರ್ಜಿ ವಸತಿ ಶಾಲೆಗಳನ್ನು ಸ್ಥಾಪಿಸಲಾಯಿತು. ಇಂದು ಹೋಬಳಿಗೊಂದರಂತೆ 800ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.
“ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನ ಪಡೆದಿದೆ. ಈ ಬಾರಿ ಐದರೊಳಗೆ ಬರಬೇಕು ಎಂದು ಸೂಚಿಸಿದ್ದೆ. ಏಳನೇ ಸ್ಥಾನ ಪಡೆದಿದೆ. ಮುಂದಿನ ಬಾರಿ ಈ ಗುರಿ ಸಾಧಿಸುವಂತೆ ತಿಳಿಸಲಾಗುವುದು” ಎಂದರು.
ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುವುದಿಲ್ಲ. ಈ ಕಾರಣಕ್ಕೆ ಬಸವಣ್ಣನವರ ಮೂರ್ತಿಗೆ ಹಾರ ಹಾಕಿ, ಅವರನ್ನು ಸ್ಮರಿಸುತ್ತಾ, ಅವರ ವಿಚಾರಗಳನ್ನು ಸ್ಮರಿಸಿ, ಆ ದಾರಿಯಲ್ಲಿ ನಡೆಯುವ ಸಂಕಲ್ಪ ಮಾಡಿದ್ದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
