2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ.83.67 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಎನ್ ಶಿವಶಂಕರ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 14,223 ಮಂದಿ ವಿದ್ಯಾರ್ಥಿಗಳ ಪೈಕಿ 11,900 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿ ಸ್ನೇಹ ಎಲ್ ಎಂಬುವವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ದೇವನಹಳ್ಳಿ ತಾಲೂಕಿನ ಶಾಂತಿನಿಕೇತನ ಆಂಗ್ಲ ಶಾಲೆಯ ಮಹೇಶ್ವರಿ 625ಕ್ಕೆ 620 ಅಂಕ ಪಡೆದು ದ್ವಿತೀಯ ಸ್ಥಾನ, ದೊಡ್ಡಬಳ್ಳಾಪುರ ಟೌನ್ ನಳಂದ ಪ್ರೌಢಶಾಲೆಯ ಪೂರ್ಣಶ್ರೀ 625 ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರೇ ಮೇಲುಗೈ : 6,988 ಬಾಲಕಿಯರ ಪೈಕಿ 6,171 ಬಾಲಕಿಯರು ಉತ್ತೀರ್ಣರಾಗಿ ಶೇ.88.31 ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಾಲಕರು 7,235 ಮಂದಿ ವಿದ್ಯಾರ್ಥಿಗಳ ಪೈಕಿ 5,729 ಮಂದಿ ವಿದ್ಯಾರ್ಥಿಗಳು ಉತ್ತೀರ್ಣತೆ ಪಡೆದು ಶೇ.79.18 ರಷ್ಟು ಫಲಿತಾಂಶ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅನುದಾನಿತ ಶಾಲೆ ವಿದ್ಯಾರ್ಥಿನಿ ಸಹನಾ ತಾಲೂಕಿಗೆ ಪ್ರಥಮ
ದೇವನಹಳ್ಳಿ ಶೇ.88.2 ರಷ್ಟು, ದೊಡ್ಡಬಳ್ಳಾಪುರ ಶೇ.83.13 ರಷ್ಟು, ಹೊಸಕೋಟೆ ತಾಲೂಕು ಶೇ.82.22 ರಷ್ಟು ಹಾಗೂ ನೆಲಮಂಗಲ ತಾಲೂಕು ಶೇ.79.51 ರಷ್ಟು ಫಲಿತಾಂಶ ಪಡೆದಿವೆ.
