ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ತಾಪಮಾನ ಏರಿಕೆಯಾಗಿತ್ತು. ಬಿಸಿಲಿನ ತಾಪಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಜನ ಬೇಸತ್ತಿದ್ದರು. ಕಳೆದ ಎರಡು ದಿನಗಳಿಂದ ನಗರದಲ್ಲಿ ಸಾಯಂಕಾಲ ವೇಳೆ ಮಳೆಯಾಗುತ್ತಿದೆ. ಸುಮಾರು ಎರಡು ತಿಂಗಳ ಕಾಲ ವಿಪರೀತ ಬಿಸಿಲಿನ ವಾತಾವರಣಕ್ಕೆ ಬೇಸತ್ತಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಜತೆಗೆ, ಬೆಂಗಳೂರಿನಲ್ಲಿ ಮಾರ್ಚ್‌ನಿಂದ ಕನಿಷ್ಠ ತಾಪಮಾನ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ಪ್ರಕಾರ, “ಶುಕ್ರವಾರ ನಗರದಲ್ಲಿ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ. ಫೆಬ್ರುವರಿಯಲ್ಲಿ ಕೇವಲ ಒಂದೆರಡು ದಿನ ಮಾತ್ರ ತಾಪಮಾನ ಕಡಿಮೆಯಾಗಿತ್ತು. ತೀವ್ರವಾದ ಬಿಸಿ ವಾತಾವರಣದ ದೀರ್ಘಾವಧಿಯ ನಂತರ ಶುಕ್ರವಾರ ಗರಿಷ್ಠ 31.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿಗೆ ಮೇ ತಿಂಗಳ ಸರಾಸರಿಗಿಂತ 1.3 ಡಿಗ್ರಿ ಕಡಿಮೆಯಾಗಿದೆ” ಎಂದು ತಿಳಿಸಿದೆ.
“ಏಪ್ರಿಲ್‌ನಲ್ಲಿ ಮಳೆಯ ಕೊರತೆಯಿಂದ ಬೆಂಗಳೂರು ಅಧಿಕ ತಾಪಮಾನ ಅನುಭವಿಸಿತು. ಮಾರ್ಚ್ 22ರಂದು ಗರಿಷ್ಠ ತಾಪಮಾನ 32.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಏಪ್ರಿಲ್‌ನಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ತಾಪಮಾನ ಎಂದರೆ ಅದು 34 ಡಿಗ್ರಿ ಸೆಲ್ಸಿಯಸ್ ಆಗಿದೆ ”ಎಂದು ಐಎಂಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಮಳೆಯು ತಾಪಮಾನ ತಣ್ಣಗಾಗಲು ಸಹಾಯ ಮಾಡಿದೆ. ಮುಂದಿನ ವಾರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ” ಎಂದು ಐಎಂಡಿ ವಿಜ್ಞಾನ ಮತ್ತು ನಿರ್ದೇಶಕ ಸಿಎಸ್ ಪಾಟೀಲ್ ಅವರು ಮುನ್ಸೂಚನೆಯನ್ನು ನೀಡಿದ್ದಾರೆ.
“ಈ ಮೇ ತಿಂಗಳಲ್ಲಿ ನಗರವು ಸಾಮಾನ್ಯ ಮಳೆಯನ್ನು ಪಡೆಯುತ್ತದೆ ಎಂದು ನಮಗೆ ವಿಶ್ವಾಸವಿದೆ. ನಿರೀಕ್ಷೆಯಂತೆ ಮಳೆ ಬಂದರೆ ತಾಪಮಾನ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ 128.7 ಮಿಮೀ ಮಳೆಯಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂಟಿ ಮಹಿಳೆಯ ಕೊಲೆಗೈದು ಚಿನ್ನದ ಸರ ಕಳವು: ದೂರು ದಾಖಲು
ಮೇ ತಿಂಗಳಲ್ಲಿ ಆರಂಭವಾದ ಮಳೆಯಿಂದಾಗಿ ತಾಪಮಾನವು ಗಮನಾರ್ಹವಾಗಿ ಕುಸಿತ ಕಂಡಿದೆ. ಮೇ 1ರಂದು 38.1 ಡಿಗ್ರಿ ಸೆಲ್ಸಿಯಸ್‌ನಿಂದ 10 ದಿನಗಳ ಅಂತರದಲ್ಲಿ 31.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.
ನಗರದಲ್ಲಿ ಮೇ 14ರವರೆಗೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯು ಹೆಚ್ಚಾಗಿ ಸಂಜೆ ಅಥವಾ ರಾತ್ರಿಯಲ್ಲಿ ಸಂಭವಿಸುತ್ತದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನವು ಕ್ರಮವಾಗಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಮೂಲ : ಡೆಕ್ಕನ್ ಹೆರಾಲ್ಡ್