ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕ್ರಮಕೈಗೊಳ್ಳಲು ಭಾರತ ಚುನಾವಣಾ ಆಯೋಗ (ಇಸಿಐ) ವಿಫಲವಾಗಿದೆ ಎಂದು ಆರೋಪಿ ದೇಶಾದ್ಯಂತ ಹಲವಾರು ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿವೆ. ಅಲ್ಲದೆ, ‘#GrowASpineOrResign’ (ಬೆನ್ನುಮೂಳೆ ಗಟ್ಟಿ ಮಾಡಿಕೊಳ್ಳಿ ಅಥವಾ ರಾಜೀನಾಮೆ ಕೊಡಿ) ಎಂಬ ಅಭಿಯಾನ ಆರಂಭಿಸಿವೆ.
ಮೋದಿ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರಗಳಲ್ಲಿ ಎಗ್ಗಿಲ್ಲದೆ ದ್ವೇಷ ಭಾಷಣ ಮಾಡುತ್ತಿದ್ದಾರೆ. ಮೋದಿ ಅವರು ಹಸೀ ಹಸೀ ಸುಳ್ಳುಗಳ ಮೂಲಕ ಕೋಮು ದ್ವೇಷ ಪ್ರಚೋದಿಸುತ್ತಿದ್ದಾರೆ. ಆದರೂ, ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
ದೆಹಲಿಯಲ್ಲಿರುವ ಚುನಾವಣಾ ಆಯೋಗದ ಹೊರಗೆ ಹಲವಾರು ಮಂದಿ ಪ್ಲೆಕಾರ್ಡ್‌ಗಳನ್ನು ಹಿಡಿದು, ಪ್ರತಿಭಟನೆ ನಡೆಸಿದ್ದಾರೆ. ಅಹಮದಾಬಾದ್, ಹೈದರಾಬಾದ್, ಮುಂಬೈ, ಬೆಂಗಳೂರು ಮತ್ತು ಮೈಸೂರುಗಳಿಂದ ಹಲವಾರು ಮುಖಂಡರು ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
“ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ಚಾಟಿ ಬೀಸುವ ಆಯೋಗ, ಆಡಳಿತರೂಢ ಬಿಜೆಪಿ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಪಕ್ಷಪಾತಿ ಧೋರಣೆಯಿಂದ ವರ್ತಿಸುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಪ್ರಚಾರ ರ‍್ಯಾಲಿಯಿಂದ ಆರಂಭಿಸಿ ಆಂಧ್ರ, ಉತ್ತರ ಪ್ರದೇಶ ಸೇರಿದಂತೆ ಎಲ್ಲಡೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ಅನ್ನು ಗುರಿಯಾಗಿಸಿಕೊಂಡು ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮಾಡಿದ್ದರು. ಆದರೂ, ಮೋದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಆಯೋಗ ಮೌನವಾಗಿದೆ. ಹೀಗಾಗಿ, ಆಯೋಗದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಹಲವಾರು ದೂರುಗಳು ಮತ್ತು ಸಾಕ್ಷ್ಯಗಳನ್ನು ನೀಡದ ಹೊರತಾಗಿಯೂ, ಆಯೋಗವು ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ.
ಸಾಕಷ್ಟು ಟೀಕೆಗಳ ನಂತರ, ಅಂತಿಮವಾಗಿ ಚುನಾವಣಾ ಆಯೋಗವು ಮೋದಿಗೆ ನೋಟಿಸ್ ನೀಡುವ ಬದಲು, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ನೋಟಿಸ್ ಕಳಿಸಿದೆ. ಆದರೆ, ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣಗಳಲ್ಲಿ ಯಾರು ಭಾಷಣ ಮಾಡಿದ್ದರೂ ಆ ವ್ಯಕ್ತಿಗೆ ನೇರವಾಗಿ ನೋಟಿಸ್ ಕಳಿಸಬೇಕೆಂಬುದು ನಿಯಮ.
ಅಲ್ಲದೆ, 2ನೇ ಮತ್ತು 3ನೇ ಹಂತದ ಮತದಾನದ ಅಂಕಿಅಂಶ ಬಿಡುಗಡೆಗೂ ಆಯೋಗ ವಿಳಂಬ ಮಾಡಿಯೂ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಬಿಡುಗಡೆಯಾಗಿರುವ ಸಂಖ್ಯೆಯೂ ನೈಜ ಅಂಶಅಂಶವಲ್ಲ ಎಂಬ ಆರೋಪಗಳು ಇವೆ.
ಈ ಹಿನ್ನೆಲೆಯಲ್ಲಿ, ಹಲವಾರು ಸಂಘಟನೆಗಳು – ನ್ಯಾಷನಲ್ ಅಲೈಯನ್ಸ್ ಫಾರ್ ಪೀಪಲ್ಸ್ ಮೂವ್‌ಮೆಂಟ್ಸ್, ಬಹುತ್ವ ಕರ್ನಾಟಕ, ಅಖಿಲ ಭಾರತ ವಕೀಲರ ಸಂಘ, ಜಾತ್ಯತೀತ ಪ್ರಜಾಪ್ರಭುತ್ವಕ್ಕಾಗಿ ಭಾರತೀಯ ಮುಸ್ಲಿಮರು ಹಾಗೂ ಭಾರತ್ ಬಚಾವೋ ಆಂದೋಲನ -‘#GrowASpineOrResign’ ಅಭಿಯಾನ ಆರಂಭಿಸಿವೆ.