ಹತ್ತು ಗ್ಯಾರಂಟಿಗಳೊಂದಿಗೆ ಎಎಪಿ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದರು. ವಿಪಕ್ಷ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ 10 ಗ್ಯಾರಂಟಿಗಳ ಭರವಸೆಗಳನ್ನು ಈಡೇರಿಸುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಎಎಪಿ ಪಕ್ಷದ ಹತ್ತು ಗ್ಯಾರಂಟಿಗಳಲ್ಲಿ, ದೇಶಾದ್ಯಂತ 200 ಯೂನಿಟ್ ಉಚಿತ ವಿದ್ಯುತ್, ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಉತ್ತಮ ಚಿಕಿತ್ಸೆ, ಚೀನಾದಿಂದ ವಶಪಡಿಸಿಕೊಂಡ ಭೂಮಿಯನ್ನು ಮರಳಿ ಹಿಂಪಡೆಯುವುದು, ಅಗ್ನಿವೀರ್ ಯೋಜನೆ ಸ್ಥಗಿತ ಕೂಡ ಸೇರಿವೆ.
ರೈತರಿಗೆ ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ದೆಹಲಿಗೆ ರಾಜ್ಯದ ಸ್ಥಾನಮಾನ, ದೇಶಾದ್ಯಂತ ಭ್ರಷ್ಟಾಚಾರ ತೊಲಗಿಸುವುದು, ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿ, ಜಿಎಸ್‌ಟಿಯನ್ನು ಸರಳಗೊಳಿಸಿ ಚೀನಾವನ್ನು ವ್ಯಾಪಾರ ವಹಿವಾಟಿನಲ್ಲಿ ಮೀರಿಸುವುದು ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗಾಗಿ 10 ಕೇಜ್ರಿವಾಲ್ ಗ್ಯಾರಂಟಿಗಳನ್ನು ಘೋಷಿಸುತ್ತಿದ್ದೇನೆ. ನನ್ನ ಬಂಧನದ ಕಾರಣದಿಂದ ಗ್ಯಾರಂಟಿ ಯೋಜನೆಗಳ ಘೋಷಣೆ ತಡವಾಗಿದ್ದವು. ಆದರೂ ಇನ್ನೂ ಹಲವು ಹಂತಗಳ ಚುನಾವಣೆಗಳು ಬಾಕಿಯಿವೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ನಂತರ ಈ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ದೆಹಲಿ ಅಬಕಾರಿ ಹಗರಣದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಮಧ್ಯಂತರ ಜಾಮೀನಿನ ಮೇಲೆ ಶುಕ್ರವಾರ ಬಿಡುಗಡೆಗೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಮಾತ್ರ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದು, ಜೂನ್ 1ರ ನಂತರ ನ್ಯಾಯಾಲಯಕ್ಕೆ ಶರಣಾಗಬೇಕೆಂದು ಷರತ್ತು ವಿಧಿಸಲಾಗಿದೆ. ಅಲ್ಲದೆ ಜಾಮೀನಿನ ಸಮಯದಲ್ಲಿ ಮುಖ್ಯಮಂತ್ರಿ ಕಚೇರಿಯ ಯಾವುದೇ ಕಾರ್ಯಕಲಾಪಗಳನ್ನು ಕೈಗೊಳ್ಳಬಾರದು ಎಂದು ತಿಳಿಸಲಾಗಿದೆ.
