ಐಪಿಎಲ್ 2024ರ 17ನೇ ಆವೃತ್ತಿ ಬಹುತೇಕ ಲೀಗ್ ಪಂದ್ಯಗಳು ಮುಗಿದು ಮಹತ್ವದ ಹಂತ ತಲುಪುತ್ತಿದೆ. ಸತತ ಆರು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ಸತತ ಐದು ಪಂದ್ಯಗಳನ್ನು ಗೆದ್ದು ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
13 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 6 ಗೆಲುವು 7 ಸೋಲುಗಳೊಂದಿಗೆ 12 ಅಂಕ ಪಡೆದಿದ್ದು ರನ್‌ರೇಟ್‌ನಲ್ಲೂ 0.387 ಉತ್ತಮವಾಗಿದೆ. ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಬೇಕೆಂದರೆ ಮೇ 18ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್‌ರೇಟ್ ಗೆಲುವಿನೊಂದಿಗೆ ಉಳಿದ ಇತರ ಪಂದ್ಯಗಳಲ್ಲಿ ಕೆಲವೊಂದು ಪವಾಡಗಳು ನಡೆಯಬೇಕು.
12 ಪಂದ್ಯವಾಡಿ 10 ಅಂಕ ಪಡೆದಿರುವ ಗುಜರಾತ್ ಟೈಟಾನ್ಸ್ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋಲಬೇಕು. ಗುಜರಾತ್ ತಂಡ ಹೈದರಾಬಾದ್ ವಿರುದ್ಧ ಗೆದ್ದು ಕೋಲ್ಕತ್ತಾ ವಿರುದ್ಧ ಸೋಲಬೇಕು. ಲಖನೌ ಸೂಪರ್ ಜೈಂಟ್ಸ್ ಕೂಡ ಡೆಲ್ಲಿ ವಿರುದ್ಧ ಸಾಧಾರಣ ಅಂತರದಿಂದ ಜಯಗಳಿಸಿ, ಮುಂಬೈ ಇಂಡಿಯನ್ಸ್ ವಿರುದ್ಧ ಭಾರಿ ಅಂತರದಿಂದ ಪರಾಭವಗೊಳ್ಳಬೇಕು.
ಈ ಸುದ್ದಿ ಓದಿದ್ದೀರಾ? ಕೆ ಎಲ್ ರಾಹುಲ್ ನಾಯಕನ ಹುದ್ದೆ ತೊರೆಯುವ ಸಾಧ್ಯತೆ: ಮುಂದಿನ ವರ್ಷ ತಂಡಕ್ಕೆ ಸೇರ್ಪಡೆ ಅಸಂಭವ
14 ಅಂಕಗಳಿಸಿ 4ನೇ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಉಳಿದ ಎರಡೂ ಪಂದ್ಯಗಳಲ್ಲೂ ಸೋಲಬೇಕು. ರನ್ ರೇಟ್ ಕೂಡ ಕಡಿಮೆ ಉಳಿಸಿಕೊಳ್ಳಬೇಕು. ಈ ಪವಾಡಗಳು ಉಳಿದ ಐಪಿಎಲ್ ಪಂದ್ಯಗಳಲ್ಲಿ ನಡೆದರೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಪ್ ನಾಲ್ಕರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ.
ಸದ್ಯ ಟೂರ್ನಿಯಲ್ಲಿ ಕೆಕೆಆರ್ ತಂಡ ಪ್ಲೇಆಪ್ ತಲುಪಿದ್ದು, ಮುಂಬೈ ಹಾಗೂ ಪಂಜಾಬ್ ಟೂರ್ನಿಯ ಉಳಿದ ಪಂದ್ಯಗಳಿದ್ದರೂ ಟೂರ್ನಿಯಿಂದ ನಿರ್ಗಮಿಸಿವೆ. 16 ಅಂಕ ಪಡೆದಿರುವ ರಾಜಸ್ಥಾನ ಎರಡು ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಲು ಸುಲಭ ಅವಕಾಶವಿದೆ. ಉಳಿದ ಎರಡು ಪ್ಲೇಆಫ್ ತಂಡಗಳಿಗೆ ಮಾತ್ರ ಬೆಂಗಳೂರು ಒಳಗೊಂಡು 6 ತಂಡಗಳು ಪೈಪೋಟಿ ನಡೆಸಬೇಕಿದೆ.
