ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳೂ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಮ್ಮೆಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿ, “ನಮ್ಮ ಪಕ್ಷದ ಎಲ್ಲ ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಸಮ್ಮುಖದಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಅಪಾರ ಅನುಭವ ಇರುವ ನಮ್ಮ ಇಬ್ಬರು ಅಭ್ಯರ್ಥಿಗಳು ಮತ್ತೊಮ್ಮೆ ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗಿ ಬರಲಿದ್ದಾರೆ” ಎಂದರು.
“ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೇವೆ. ಈ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸಿ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ” ಎಂದು ತಿಳಿಸಿದರು.
ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ: ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಅವರು ಇದೇ ವೇಳೆ ಮಾತನಾಡಿ, “ಸಿದ್ದರಾಮಯ್ಯ ಸೇರಿ ಯಾರೇ ಪ್ರಚಾರ ಮಾಡಿದರೂ ಕಾಂಗ್ರೆಸ್ಸಿಗೆ ಇಲ್ಲಿ ಉಳಿಗಾಲ ಇಲ್ಲ” ಎಂದು ಅಭಿಪ್ರಾಯಪಟ್ಟರು.
“ವೈ.ಎ.ನಾರಾಯಣಸ್ವಾಮಿ ಮತ್ತು ಅ.ದೇವೇಗೌಡರ ಗೆಲುವು ನಿಶ್ಚಿತ. ವೈ.ಎ.ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸ, ಅವರ ಸಂಪರ್ಕ, ನಿರಂತರ ಸೇವೆ ಗಮನಿಸಿ ಅವರ ಆಶೀರ್ವಾದ ಖಚಿತ; ಬೆಂಗಳೂರಿನಲ್ಲಿ ಅ.ದೇವೇಗೌಡರು ಮತದಾರರ ಉತ್ತಮ ಒಲವನ್ನು ಹೊಂದಿದ್ದಾರೆ” ಎಂದು ತಿಳಿಸಿದರು.
ವೈ ಎ ನಾರಾಯಣಸ್ವಾಮಿ ಮತ್ತು ಅ.ದೇವೇಗೌಡ ಅವರು ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಗೌಡ, ಮುಖಂಡ ಲಕ್ಷ್ಮೀನಾರಾಯಣ್, ಮಾಜಿ ಶಾಸಕ ಎಂ.ಕೃಷ್ಣರೆಡ್ಡಿ ಮತ್ತಿತರ ಮುಖಂಡರು ಹಾಜರಿದ್ದರು.
