ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಯುಜಿಡಿ ನೀರು ಸಂಸ್ಕರಣಾ ಘಟಕದಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ವಿಜಯಪುರದ ಗಚ್ಚಿನಕಟ್ಟಿ ಕಾಲೋನಿಯ ಮಿಹಿರ್ ಶ್ರೀಕಾಂತ್ ಜನಗೌಳಿ (7), ಗದಗ ಮೂಲದ ವಿಜಯ್ ಅನಿಲ್ ದಹಿಂದೆ (7) ಹಾಗೂ ಅನುಷ್ಕಾ ಅನಿಲ್ ದಹಿಂದೆ (8) ಮೃತ ದುರ್ದೈವಿಗಳು. ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಕ್ಕಳ ಸಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಮೂಲದ ಮೂವರು ಮಕ್ಕಳು ತಮ್ಮ ಅಜ್ಜಿ ಮನೆಗೆ ಬಂದಿದ್ದರು. ಭಾನುವಾರ ಬೆಳಿಗ್ಗೆ ಚಾಬಕಸಾಬ್ ದರ್ಗಾದ ಬಳಿ ಒಂಟೆ ಸವಾರಿ ಮಾಡಿದ್ದ ಮಕ್ಕಳು, ಅಲ್ಲಿಯೇ ಆಟವಾಡುತ್ತಿದ್ದರು ಎಂದು ಹೇಳಲಾಗಿದೆ.
ಮಕ್ಕಳು ಸಂಜೆಯಾದರೂ ಮನಗೆ ಬಾರದ್ದರಿಂದ ಕುಟುಂಬಸ್ಥರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಕ್ಕಳ ಪತ್ತೆಯಾಗದ ಕಾರಣ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಟಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿತ್ತು. ಮಕ್ಕಳು ಹೋಗಿದ್ದ ರಸ್ತೆಯುದ್ದಕ್ಕೂ ಪರಿಶೀಲಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಯುಜಿಡಿ ನೀರು ಸಂಸ್ಕರಣ ಘಟಕದ ಬೃಹತ್ ಚರಂಡಿಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ಸಂಸ್ಕರಣ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ಅಥವಾ ಬೇಲಿ ಹಾಕಿಲ್ಲ. ಹೀಗಾಗಿಯೇ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ದೂರು ನೀಡಿದರೂ ಸಹ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲಾ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.