ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸತತ ಎರಡು ಬಾರಿ ಆಯ್ಕೆಯಾಗಿರುವ ಅವರು ಮೂರನೇ ಬಾರಿ ಇಲ್ಲಿಂದ ಆಯ್ಕೆ ಬಯಸುತ್ತಿದ್ದಾರೆ.
ಪ್ರಧಾನಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಕೂಡ ಜೊತೆಗಿದ್ದರು.
ಮೋದಿ 2014 ಹಾಗೂ 2019ರಿಂದ ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2014ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಅವರು ಗುಜರಾತ್‌ನ ವಡೋದರ ಕ್ಷೇತ್ರದಿಂದಲೂ ಕಣಕ್ಕಿಳಿದು ಆಯ್ಕೆಯಾಗಿದ್ದರು. ಆನಂತರದಲ್ಲಿ ವಡೋದರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ
ಮೋದಿ ಪ್ರತಿಸ್ಪರ್ಧಿಯಾಗಿ ವಾರಣಾಸಿ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಅಜಯ್ ರೈ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೆ ಉತ್ತರ ಪ್ರದೇಶದ ಹಾಸ್ಯ ಕಲಾವಿದ ಶ್ಯಾಮ್ ರಂಗೀಲ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ.
ವಾರಣಾಸಿಯಲ್ಲಿ ಜೂನ್ 1ರಂದು ಕೊನೆಯ ಹಾಗೂ 7ನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಜೂ.4 ರಂದು ಎಲ್ಲ 543 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
ಪ್ರಧಾನಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಗಳ ಅಂದಗೊಳಿಸುವಿಕೆ, ಸಾವಿರಾರು ಜನರನ್ನು ಕರೆತಂದಿರುವುದು ಹಾಗೂ ಅಗತ್ಯಕ್ಕಿಂತಲೂ ಹೆಚ್ಚು ಜನರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದರೂ ಚುನಾವಣಾ ಆಯೋಗ ಮಾತ್ರ ಮೂಕಪ್ರೇಕ್ಷಕನಾಗಿದೆ. ಮಾಜಿ ಚುನಾವಣಾ ಆಯುಕ್ತರಾದ ಟಿ ಎನ್ ಶೇಷನ್ ಅವರ ಆತ್ಮ ಇವೆಲ್ಲ ದೃಶ್ಯಗಳನ್ನು ನೋಡಿ ನಗುತ್ತಿರಬಹುದು ಎಂದು ಹಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
