ದಾವಣಗೆರೆ | ಬೇಸಿಗೆಯಲ್ಲೂ ಪ್ರಯಾಣಿಕರಿಗೆ ಬಳಕೆಯಾಗದ ಬಸ್‌ ನಿಲ್ದಾಣದ ಕುಡಿಯುವ ನೀರಿನ ಘಟಕ

Date:

ರಾಜ್ಯದಲ್ಲಿ ಬಿರುಬಿಸಿಲಿನಿಂದಾಗಿ ಬಿಸಿ ಗಾಳಿ ಬೀಸುತ್ತಿದೆ. ಬಿಸಿಲು ಕೆಂಡದಂತೆ ಸುಡುತ್ತಿದೆ. ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳು ಹೈರಾಣಾಗಿವೆ. ದಾಹ, ನೀರಿಗೆ ಹಾಹಾಕಾರ ಎದುರಾಗಿರುವ ನಡುವೆಯೂ, ಸಾವಿರಾರು ಮಂದಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವೊಂದು ಹಲವು ತಿಂಗಳುಗಳಿಂದ ಉಪಯೋಗಕ್ಕೆ ಬಾರದೇ ನಿಂತಿದೆ. ಜನರ ದಾಹವನ್ನು ತಣಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ನಿರ್ಮಿಸಿದ್ದ ಘಟಕದ ಬಗ್ಗೆ ಬಸ್‌ ನಿಲ್ದಾಣದ ಆಡಳಿತ, ನಗರಾಡಳಿತ, ಸಾರಿಗೆ ಇಲಾಖೆ ಸೇರಿದಂತೆ ಯಾರೊಬ್ಬರೂ ಅಸಕ್ತಿ ತೋರುತ್ತಿಲ್ಲ. ಪರಿಣಾಮ ಘಟಕ ಇದ್ದೂ ಇಲ್ಲದಂತಾಗಿದೆ.

ಮದ್ಯ ಕರ್ನಾಟಕದ ಬೆಣ್ಣೆ ನಗರಿ ದಾವಣಗೆರೆಯ ಹೈಸ್ಕೂಲ್ ಮೈದಾನದ ಬಳಿಯಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಎರಡು ವರ್ಷಗಳ ಹಿಂದೆ ಬಸ್ ನಿಲ್ದಾಣ ಪ್ರಾರಂಭಿಸಿದಾಗ ಸರ್ಕಾರ ಹತ್ತಾರು ಲಕ್ಷ ರೂ. ಖರ್ಚು ಮಾಡಿ ಶುದ್ಧ ನೀರಿನ ಘಟಕ ನಿರ್ಮಿಸಿತ್ತು. ಆರಂಭಶೂರತ್ವದಂತೆ ಕೆಲ ದಿನಗಳಷ್ಟೇ ಬಳಕೆಯಾದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ರಮೇಣ ಸ್ಥಗಿತಕೊಂಡಿದೆ.  ಈಗ ಕಾರ್ಯನಿರ್ವಹಿಸದ ಕಾರಣ, ಪ್ರಯಾಣಿಕರಿಂದ ದೂರ ಉಳಿದಿದೆ.

ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಎರಡು ವರ್ಷದ ಹಿಂದೆ ಇಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಬೋರ್ಡ್ ಹೆಸರೇ ಒಂದಿದ್ದರೆ, ಬಸ್ ಹೋಗುವ  ಮಾರ್ಗವೇ ಬೇರೆಯಿರುತ್ತದೆ. ಸಾಕಷ್ಟು ಸ್ಥಳವಿಲ್ಲದೆ ಕಿಕ್ಕಿರಿದ ಜಾಗದಲ್ಲಿ ಸಾವಿರಾರು ಬಸ್‌ಗಳ ಓಡಾಟ, ಸಮಯಕ್ಕೆ ಬಾರದ ಬಸ್, ಗ್ರಾಮೀಣ ಭಾಗಗಳಿಗೆ ಹೋಗುವ ಬಸ್ ಎಲ್ಲಿ ನಿಲ್ಲುತ್ತದೆ ಎಂಬ ಮಾಹಿತಿಯೇ ಇಲ್ಲದೆ, ಪ್ರಯಾಣಿಕರು ಪರದಾಡುವ ಪರಸ್ಥಿತಿ ಇದೆ. ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆಯೇ ತಾತ್ಕಾಲಿಕವಾಗಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ನೂತನ ನಿಲ್ದಾಣಕ್ಕೆ ಸ್ಥಳಾಂತರಕ್ಕಾಗಿ ಕಾಯುತ್ತಿದೆ. ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಳೆ ಪಿ.ಬಿ ರಸ್ತೆಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾಗಿದ್ದರೂ, ಇನ್ನೂ ಸೇವೆಯ ಭಾಗ್ಯ ದೊರೆತಿಲ್ಲ. ಲೋಕಸಭೆ ಚುನಾವಣೆಗೂ ಮುನ್ನಾ ಮಾರ್ಚ್‌ನಲ್ಲಿ ತರಾತುರಿಯಲ್ಲಿ ಉದ್ಘಾಟನೆಯಾದ ಬಸ್ ನಿಲ್ದಾಣ ಮತದಾನ ಮುಗಿದರೂ ಸ್ಥಳಾಂತರವಾಗಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಿನಕ್ಕೆ ಹತ್ತಾರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿ ಬೇರೆ ಬೇರೆ ಗ್ರಾಮ/ನಗರಗಳಿಗೆ ಹೋಗುತ್ತಾರೆ. ದಿನಕ್ಕೆ ಲಕ್ಷಾಂತರ ರೂ. ಲಾಭ ಪಡೆಯುವ ಇಲ್ಲಿನ ನಿಲ್ದಾಣದಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದರಿಂದ ಪ್ರಯಾಣಿಕರು ಪರಿತಪಿಸುವಂತಾಗಿದೆ. ಬಸ್‌ ನಿಲ್ದಾಣದಲ್ಲಿರುವ ಘಟಕದಲ್ಲಿ ಈ ಹಿಂದೆ, ಒಂದು ರೂ. ನಾಣ್ಯ ಹಾಕಿದರೆ ಎರಡು ಲೀಟರ್ ಶುದ್ಧ ನೀರು ಸಿಗುತ್ತಿತ್ತು. ಆದರೆ, ಈಗ ಅದು ಕೆಟ್ಟು ಬಹಳ ತಿಂಗಳಾಗಿವೆ. ಹೀಗಾಗಿ, ಪ್ರಯಾಣಿಕರಿಗೆ ಕುಡಿಯುವ ನೀರು ಸಿಗದಂತಾಗಿದೆ. ಉಳ್ಳವರು ವಾಣಿಜ್ಯ ಮಳಿಗೆಗಳಲ್ಲಿ ಬಾಟಲಿ ನೀರಿನ ಮೊರೆ ಹೋಗುತ್ತಿದ್ದಾರೆ. ಹಣವಿಲ್ಲದವರು ಗಂಟಲು ಒಣಗಿಸಿ ಕೊಂಡು ಬಸ್ ಏರುತ್ತಿದ್ದಾರೆ.

ನೀರಿನ ಘಟಕ ಕೆಟ್ಟು ಹೋಗಿ ಹಲವು ತಿಂಗಳು ಕಳೆದರೂ ಇನ್ನೂ ರಿಪೇರಿ ಮಾಡಿಲ್ಲ. ರಿಪೇರಿ ಮಾಡದಿರುವುದರ ಹಿಂದೆ ಖಾಸಗಿ ಮಿನರಲ್ ನೀರಿನ ಬಾಟಲಿ ವ್ಯಾಪಾರಿಗಳ ಲಾಬಿ ಇದೆ ಎನ್ನುವ ಆರೋಪವಿದೆ. ಹಲವಾರು ಪ್ರಯಾಣಿಕರು ನೀರಿನ ಘಟಕ ರಿಪೇರಿ ಮಾಡಿಸುವಂತೆ ಕೇಳಿದರೆ ಅಧಿಕಾರಿಗಳು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ.

ಪ್ರತಿ ನಿತ್ಯ ದಾವಣಗೆರೆಯಿಂದ ಜಗಳೂರು ತಾಲೂಕಿನ ಹಳ್ಳಿಗೆ ತೆರಳುವ ಶಿಕ್ಷಕ ದುರುಗೇಶ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ನೀರಿನ ಘಟಕವು ಸುಮಾರು ದಿನಗಳಿಂದ ಕೆಟ್ಟು ನಿಂತಿದೆ. ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹನಿ ಹನಿ ನೀರಿಗೂ ಪರದಾಡುವ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ದುಡ್ಡು ಕೊಡುತ್ತೇವೆಂದರೂ ಇಲ್ಲಿ ನೀರಿಲ್ಲ. ಶುದ್ಧ ನೀರಿನ ಘಟಕವನ್ನು ಪ್ರಾರಂಭಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಸಾಮಾನ್ಯ ಬಡ ಜನರಿಗೆ 20 ರೂ.ಗೆ ಒಂದು ಲೀಟರ್ ನೀರನ್ನು ಅಂಗಡಿಗಳಲ್ಲಿ ಕೊಂಡು ಕುಡಿಯಲು ಹೊರೆಯಾಗುತ್ತದೆ. ಆದ್ದರಿಂದ, ಅಧಿಕಾರಿಗಳು ಗಮನಹರಿಸಿ ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಈದಿನ.ಕಾಮ್‌ ಜೊತೆ ಮಾತನಾಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ, “ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಬಂಧಿಸಿದಂತೆ ನೀರಿನ ಸರಬರಾಜು ಮಾಡುತ್ತಿದ್ದ ಬೋರ್ವೆಲ್ ಸಂಪೂರ್ಣವಾಗಿ ನೀರಿಲ್ಲದೆ ಒಣಗಿಹೋಗಿದೆ. ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಇತ್ತೀಚಿಗೆ ಗಮನಕ್ಕೆ ಬಂದಿದೆ. ನಮ್ಮ ಇಲಾಖೆಯ ಸಂಬಂಧಿತ ಸಹಾಯಕ ಅಭಿಯಂತರರಿಗೆ ತಿಳಿಸಲಾಗಿದ್ದು, ಶೀಘ್ರವೇ ಘಟಕವನ್ನು ಸರಿಪಡಿಸಿ, ಆರಂಭಿಸಲಾಗುವುದು” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನೀಟ್ ಅವ್ಯವಹಾರ: ನ್ಯಾಯಾಂಗ ತನಿಕೆಗೆ ಡಿವಿಪಿ ಆಗ್ರಹ

ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು....

ದರ್ಶನ್ ಪ್ರಕರಣ | ವಿಶೇಷ ಪ್ರಾಸಿಕ್ಯೂಟ‌ರ್ ಆಗಿ ಪಿ ಪ್ರಸನ್ನ ಕುಮಾರ್‌ ನೇಮಕ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಆರೋಪಿಗಳು...