ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಹಾಗೂ ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಲು ತಡೆ ವಿಧಿಸಿದ್ದ ಆದೇಶವನ್ನು ವಿಸ್ತರಿಸಲು ನಿರಾಕರಿಸಿತು.
ಗೌತಮ್ ನವ್ಲಾಖಾ ಅವರು ಗೃಹ ಬಂಧನವಿದ್ದ ಅವಧಿಯಲ್ಲಿನ ಭದ್ರತಾ ವೆಚ್ಚಕ್ಕೆ 20 ಲಕ್ಷ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.
“ಹೈಕೋರ್ಟ್ ಆದೇಶದಂತೆ ಜಾಮೀನಿಗೆ ತಡೆ ಕೋರಲು ನಾವು ಒಲವು ಹೊಂದಿಲ್ಲ. ವಿಚಾರಣೆಯು ಹಲವು ವರ್ಷಗಳನ್ನು ತೆಗೆದುಕೊಂಡಿದ್ದು, ಮುಗಿಯಲು ಕೂಡ ಹಲವು ವರ್ಷಗಳಾಗುತ್ತವೆ. ವಿವಾದಗಳಿಗೆ ಹೆಚ್ಚು ಆಸ್ಪದ ನೀಡದೆ ನಾವು ಜಾಮೀನಿಗೆ ತಡೆ ನೀಡುವುದಿಲ್ಲ.ಪ್ರತಿವಾದಿ ಕಕ್ಷಿದಾರರಿಗೆ ಭದ್ರತಾ ವೆಚ್ಚ ಕೈಗೊಂಡಿದ್ದಕ್ಕಾಗಿ 20 ಲಕ್ಷ ರೂ. ಪಾವತಿಸಬೇಕೆಂದು” ಪೀಠವು ಹೇಳಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ
ಗೌತಮ್ ನವ್ಲಾಖಾ ಅವರು 4 ವರ್ಷಗಳಿಗೂ ಹೆಚ್ಚು ಕಾಲ ಸೆರೆಮನೆಯಲ್ಲಿದ್ದಾರೆ. ತನಿಖಾ ಸಂಸ್ಥೆ ಪ್ರಕರಣದಲ್ಲಿ ಯಾವುದೇ ಆರೋಪಗಳನ್ನು ದಾಖಲಿಸಲಾಗಿಲ್ಲ ಎಂದು ಪೀಠ ತಿಳಿಸಿತು.
ಕಳೆದ ವರ್ಷ ಡಿಸೆಂಬರ್ 19ರಂದು ಬಾಂಬೆ ಹೈಕೋರ್ಟ್ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿತ್ತಾದರೂ, ರಾಷ್ಟ್ರೀಯ ತನಿಖಾ ಸಂಸ್ಥೆ ಮನವಿಯ ಮೇರೆಗೆ ಜಾಮೀನಿಗೆ ತಡೆ ನೀಡಲಾಗಿತ್ತು.
2018ರ ಆಗಸ್ಟ್‌ನಲ್ಲಿ ಬಂಧಿತರಾಗಿದ್ದ ಗೌತಮ್ ನವ್ಲಾಖಾ ಅವರು ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಮುಂಬೈನ ನಿವಾಸದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಪುಣೆಯಲ್ಲಿ 2017ರ ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್ಗಾರ್ ಪರಿಷದ್ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಕಾರಣಕ್ಕಾಗಿ ಗೌತಮ್ ನವ್ಲಾಖಾ ಅವರನ್ನು ಬಂಧಿಸಲಾಗಿತ್ತು. ಸಭೆ ನಡೆದ ಮರುದಿನವೆ ಭೀಮಾ ಕೊರೆಗಾಂವ್ ಸ್ಮಾರಕದ ಬಳಿ ಹಿಂಸಾಚಾರ ಉಂಟಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರಲ್ಲಿ 6 ಮಂದಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
