ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯೊಬ್ಬಳನ್ನು ಹೀನ ಮನಸ್ಸಿನ ಯುವಕನೊಬ್ಬ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ವೀರಾಪುರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ಅಂಜಲಿ (20) ಕೊಲೆಯಾದ ದುರ್ದೈವಿ. ಆರೋಪಿಯನ್ನು ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ (21) ಎಂದು ಗುರುತಿಸಲಾಗಿದೆ. ಆತ ಪರಾರಿಯಾಗಿದ್ದಾನೆ.
ವಿಶ್ವ ಕಳೆದ ಹಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಅಂಜಲಿಯನ್ನು ಪೀಡಿಸುತ್ತಿದ್ದ. ಆದರೆ ಅಂಜಲಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಹೇಳಲಾಗಿದೆ.
ಬುಧವಾರ ಬೆಳಗ್ಗೆ, ಯುವತಿಯ ಮನೆಗೆ ಬಳಿಯೇ ಹೋಗಿದ್ದ ಆತ, ಬಾಗಿಲು ತಟ್ಟಿದ್ದಾನೆ. ಯುವತಿ ಬಾಗಿಲು ತೆರೆದ ಕೂಡಲೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ, ಹುಬ್ಬಳ್ಳಿಯಲ್ಲಿ ಪ್ರೀತಿಯ ಕಾರಣಕ್ಕಾಗಿಯೇ ನೇಹಾ ಎಂಬ ಯುವತಿಯನ್ನು ಯುವಕನೊಬ್ಬ ಕೊಲೆ ಮಾಡಿದ್ದ. ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಘಟನೆಗೆ ಕೋಮು ಬಣ್ಣ ಬಳಿದು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿತ್ತು. ಇದೀಗ, ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ.