ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳ ಗಡಿ ಮುಟ್ಟುವ ಸಾಧ್ಯತೆಗಳೂ ಇಲ್ಲ. ‘ಇಂಡಿಯಾ’ ಒಕ್ಕೂಟವು 300 ಸ್ತಾನಗಳ ಗಡಿಯನ್ನು ಸುಲಭವಾಗಿ ದಾಟುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬೊಂಗಾವ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. “ಇಂಡಿಯಾ ಒಕ್ಕೂಟವು ಕನಿಷ್ಠ 315 ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿ ಹೆಚ್ಚೆಂದರೆ 195 ಸ್ಥಾನಗಳನ್ನು ಗೆಲ್ಲಬಹುದು” ಎಂದಿದ್ದಾರೆ.
ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದಿರುವ ಬ್ಯಾನರ್ಜಿ, “ಈ ಬಾರಿ ‘ಇಂಡಿಯಾ’ ಕೂಟ ಅಧಿಕಾರಕ್ಕೆ ಬರುವುದು ಖಚಿತ. ಜೂನ್ ನಂತರ ದೆಹಲಿಯಲ್ಲಿ ಮೋದಿ ಇರುವುದಿಲ್ಲ. ನಿನ್ನೆಯವರೆಗೆ ನಾನು ಪಡೆದ ಅಂಕಿಅಂಶಗಳ ಆಧಾರದ ಮೇಲೆ; ಬಿಜೆಪಿ ಸುಮಾರು 190-195 ಸ್ಥಾನಗಳನ್ನು ಪಡೆಯಬಹುದು. ‘ಇಂಡಿಯಾ’ ಕೂಟ ಕನಿಷ್ಠ 315 ಸೀಟುಗಳನ್ನು ಪಡೆಯಲಿದೆ” ಎಂದು ಹೇಳಿದ್ದಾರೆ.
“ಇನ್ನು ಮುಂದೆ ಕೇಸರಿ ಪಕ್ಷ 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳಬಾರದು. ಇಲ್ಲಿಯವರೆಗಿನ ಮತದಾನ ಉತ್ತಮವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ನಾಯಕರು ಭಯಗೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಸಂದೇಶಖಾಲಿ ವಿಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ”ಬಿಜೆಪಿ ಮತ್ತು ಪ್ರಧಾನಿ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ‘ಗ್ಯಾರಂಟಿ ಬಾಬು’ (ಮೋದಿ ಗ್ಯಾರಂಟಿ) ಪಶ್ಚಿಮ ಬಂಗಾಳವನ್ನು ಕೆಣಕುತ್ತಿದೆ. ಈಗ, ಸತ್ಯ ಹೊರಬರುತ್ತಿದ್ದು (ಉದ್ದೇಶಪೂರ್ವಕವಾಗಿ ಮಾಡಿಸಿದ್ದ ವೀಡಿಯೊಗಳು), ಅವುಗಳನ್ನು ಪ್ರಸಾರ ಮಾಡಬೇಕು ಎಂದು ಬಿಜೆಪಿಗರು ಮಾಧ್ಯಮಗಳನ್ಉ ಕೇಳುತ್ತಿದ್ದಾರೆ. ಅವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಮಹಿಳೆಯರ ಹೆಸರು ಕೆಡಿಸಲು ಬಿಜೆಪಿ ಸಂಚು ರೂಪಿಸಿದೆ” ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರೊಬ್ಬರು ಸಂದೇಶಖಾಲಿಯ ಹಲವಾರು ಮಹಿಳೆಯರಿಂದ ಖಾಲಿ ಪೇಪರ್‌ಗಳಿಗೆ ಸಹಿ ಮಾಡಿಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಹಿಳೆಯರಿಂದ ಖಾಲಿ ಪೇಪರ್‌ಗೆ ಸಹಿ ಹಾಕಿಸಿಕೊಂಡು, ಅದರಲ್ಲಿ ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯರು ಆರೋಪಿಸಿರುವುದಾಗಿ ಉಲ್ಲೇಖಿಸಿ, ದೂರು ನೀಡಲಾಗಿತ್ತು. ಅಲ್ಲದೆ, ಟಿಎಂಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಮಹಿಳೆಯರಿಗೆ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿದೆ.