ಭಾರತದಲ್ಲಿ 2013ರಲ್ಲಿ ಉಂಟಾದ ನೆರೆ, ಚಂಡಮಾರುತಗಳು, ಭೂಕಂಪ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪ ಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಮೂಲ ನೆಲೆಯಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಜಿನಿವಾ ಮೂಲದ ಆಂತರಿಕ ಸ್ಥಳಾಂತರ ಮೇಲ್ವಿಚಾರಣೆ ಕೇಂದ್ರ(ಐಡಿಎಂಸಿ) ವರದಿ ನೀಡಿದೆ.
ಐಡಿಎಂಸಿಯ ವಾರ್ಷಿಕ ವರದಿ ‘ಆಂತರಿಕ ಸ್ಥಳಾಂತರದ ಮೇಲೆ ಜಾಗತಿಕ ವರದಿ’ಯು ಭಾರತದಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ 2022ರಿಂದ 2023ರಕ್ಕೆ ಹೋಲಿಸಿದರೆ ತೀವ್ರ ಕುಸಿತಗೊಂಡಿದೆ. ಹವಾಮಾನ ಬದಲಾವಣೆ ಆಗಾಗ ಕೆಲವು ಅಪಾಯಗಳನ್ನು ತಂದೊಡ್ಡುತ್ತದೆ ಹಾಗೂ ಸಮುದಾಯಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ವರದಿಯು ಒತ್ತಿ ಹೇಳಿದೆ.
2022ರಲ್ಲಿ ಪ್ರಾಕೃತಿಕ ವಿಕೋಪಗಳಿಂದ 25 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದರು. 2023ರಲ್ಲಿ ಈ ಸಂಖ್ಯೆ 5,28,000ಕ್ಕೆ ಇಳಿದಿದೆ ಎಂದು ಐಡಿಎಂಸಿ ವರದಿ ತಿಳಿಸಿದೆ.
ಆದಾಗ್ಯೂ ಈಶಾನ್ಯ ರಾಜ್ಯ ಮಣಿಪುರಲ್ಲಿ 2023ರಲ್ಲಿ ನಡೆದ ಹಿಂಸಾಚಾರ ಹಾಗೂ ಘರ್ಷಣೆಯಲ್ಲಿ 67 ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ. ಈ ಸಂಖ್ಯೆ ಈ ವರ್ಷ ಹೆಚ್ಚಿದ್ದು, ಕಳೆದ ವರ್ಷ 2022ರಲ್ಲಿ 1000 ಮಂದಿ ಮಾತ್ರ ಹಿಂಸಾಚಾರದಿಂದ ಸ್ಥಳಾಂತಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ಪ್ರವಾಹ ಹಾಗೂ ಚಂಡಮಾರುತದಿಂದ ಜನರು ತಮ್ಮ ಮನೆಗಳನ್ನು ಬಿಟ್ಟು ತೆರಳಲು ಕಾರಣವಾಗಿದ್ದು, ಸಾಮಾನ್ಯವಾಗಿ ಪ್ರಾಕೃತಿಕ ವಿಕೋಪ ಉಂಟಾದ ಸ್ಥಳಗಳಲ್ಲಿಯೇ ಆಗಾಗ ಈ ಘಟನೆ ಹೆಚ್ಚು ಸಂಭವಿಸುತ್ತದೆ.
ಏಳು ವರ್ಷಗಳಲ್ಲಿ ಮೊದಲ ಬಾರಿ 2023ರ ಮಧ್ಯದಲ್ಲಿ ಉಂಟಾದ ಎಲ್‌ನಿನೊ ಪರಿಣಾಮ ಬದಲಾವಣೆಗೊಂಡಿರುವುದು ಕೂಡ ಸ್ಥಳಾಂತರಗೊಂಡವರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಈ ಬಾರಿ ಭಾರತದಲ್ಲಿ ಮಳೆ ಕಡಿಮೆಯಾಗಿದ್ದು, ಅದರ ಪರಿಣಾಮ ಪ್ರವಾಹ ಸಂಬಂಧಿತ ವಿಕೋಪಗಳು ಕೂಡ ಇಳಿಕೆಯಾಗಿವೆ ಎಂದು ಐಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಎಲ್‌ನಿನೊ ಪರಿಣಾಮಗಳು ಬದಲಾವಣೆಯಿಂದ ಈ ಬಾರಿ ನೈರುತ್ಯ ಮುಂಗಾರಿನಲ್ಲಿ ಶೇ.5.6 ರಷ್ಟು ಕಡಿಮೆಯಾಗಿದೆ. ವರದಿ ಪ್ರಕಾರ 1,05,000 ಮಂದಿ ಗುಜರಾತ್ ಮತ್ತು ರಾಜಸ್ಥಾನದಿಂದ, 91 ಸಾವಿರ ಅಸ್ಸಾಂನಿಂದ ಹಾಗೂ 27 ಸಾವಿರ ದೆಹಲಿಯಿಂದ ಪ್ರವಾಹ ಮುಂತಾದ ಪರಿಸ್ಥಿತಿಯಿಂದಾಗಿ ಸ್ಥಳಾಂತರಗೊಂಡಿದ್ದಾರೆ.
