ಕರ್ನಾಟಕದಲ್ಲಿ ಲೋಕಸಭಾ ಚುಣಾವಣೆಯ ಮತದಾನ ಮುಗಿದಿದೆ. ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ರಾಜ್ಯದ 13-14 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರವಾದ ಒಲವು, ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್ನಲ್ಲಿ ಉತ್ಸಾಹ ಹೆಚ್ಚಾಗಿದೆ.
ಪಕ್ಷವು ಸುಮಾರು 18-20 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಸಮೀಕ್ಷೆ ನಡೆಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಆದರೆ, ಕೆಲವು ವಿಶ್ಲೇಷಕರು ಸುಮಾರು 13-14 ಕ್ಷೇತ್ರಗಳಲ್ಲಿ ಪಕ್ಷವು ಹೆಚ್ಚಿನ ಅಂತರಗಳಲ್ಲಿ ಗೆಲ್ಲಲಿದೆ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಲೀಂ ಅಹ್ಮದ್ ಹೇಳಿದ್ದಾರೆ.
“ದಾವಣಗೆರೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ಕಂಡಿದೆ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಇ ತುಕಾರಾಂ ಅವರಿಗೆ ಎಲ್ಲ ಬೂತ್ಗಳಲ್ಲೂ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಅವರತ್ತ ಜನರ ಚಿತ್ತವಿದೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಉಮೇಶ್ ಜಾದ್ವಾ ವಿರುದ್ಧ ಸ್ಪರ್ಧಿಸಿದ್ದು, ಅಲ್ಲಿನ ಪ್ರತಿಕ್ರಿಯೆ ಮಿಶ್ರವಾಗಿದೆ. ರಾಯಚೂರಿನಲ್ಲಿ (ಎಸ್ಟಿ ಮೀಸಲು) ಕಾಂಗ್ರೆಸ್ಗೆ ಗೆಲ್ಲುವುದು ಖಚಿತ ಎಂಬ ಅಭಿಪ್ರಾಯ ಕಾಂಗ್ರೆಸ್ನಲ್ಲಿದೆ. ಅಲ್ಲಿ ಮಾಜಿ ಐಎಎಸ್ ಅಧಿಕಾರಿ ಕುಮಾರ್ ನಾಯಕ್ ಅವರು ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ರೈ ವಿರುದ್ಧ ಸ್ಪರ್ಧಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಪಿಸಿ ಮೋಹನ್ ಮತ್ತು ಡಾ ಸಿಎನ್ ಮಂಜುನಾಥ್ ವಿರುದ್ಧ ಕಾಂಗ್ರೆಸ್ನ ಮನ್ಸೂರ್ ಅಲಿಖಾನ್ ಮತ್ತು ಹಾಲಿ ಸಂಸದ ಡಿ.ಕೆ ಸುರೇಶ್ ಕಣದಲ್ಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ಗೆ ಹೊಸ ಹುರುಪು ಮೂಡಿದ್ದು, ಬಿಜೆಪಿಯ ವಿ ಸೋಮಣ್ಣ ವಿರುದ್ಧ ಮುದ್ದ ಹನುಮೇಗೌಡ ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿಯೇ ಇಬ್ಬರು ಕಾಂಗ್ರೆಸ್ ಸಚಿವರೂ ಇದ್ದು, ಗೆಲುವು ನಿಶ್ಚಿತ ಎನ್ನಲಾಗಿದೆ. ಲಿಂಗಾಯತರು ಸೋಮಣ್ಣ ಅವರನ್ನು ಬೆಂಬಲಿಸಿದ್ದರೂ, ಒಕ್ಕಲಿಗರು, ಎಸ್ಸಿ/ಎಸ್ಟಿ, ಕುರುಬರು ಮತ್ತು ಅಲ್ಪಸಂಖ್ಯಾತರು ಒಕ್ಕಲಿಗ ಸಮುದಾಯದವರಾದ ಮುದ್ದ ಹನುಮೇಗೌಡರನ್ನು ಬೆಂಬಲಿಸಿದ್ದಾರೆ ಎಂಬುದು ಕಂಡುಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಮಾಜಿ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಯುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ಆರ್ ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಕಣಕ್ಕಿಳಿಯಲಿದ್ದಾರೆ. ರಕ್ಷಾ ಪರವಾಗಿ ಜನರು ಒಲವು ಹೊಂದಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಕೋಲಾರ ಕೂಡ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿದ್ದು, ಜೆಡಿಎಸ್ನ ಮಲ್ಲೇಶ್ ಬಾಬು ವಿರುದ್ಧ ಗೆಲ್ಲುತ್ತಾರೆ ಎಂದು ಹೇಳಲಾಗಿದೆ.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ವಿರುದ್ಧ ಕಾಂಗ್ರೆಸ್ ವಕ್ತಾರ, ಒಕ್ಕಲಿಗ ಮುಖಂಡ ಎಂ.ಲಕ್ಷ್ಮಣ್ ಕಣದಲ್ಲಿದ್ದು, ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಲಕ್ಷ್ಮಣ್ ಗೆಲ್ಲುತ್ತಾರೆಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಚಾಮರಾಜನಗರದಲ್ಲಿ ಕ್ಷೇತ್ರದಲ್ಲಿ ಪರಿಚಯವೇ ಇಲ್ಲದ ಎನ್ ಬಾಲರಾಜ್ ಅವರು ಬಿಜೆಪಿಯಿಂದ ಕಣದಲ್ಲಿದ್ದು, ಅವರ ವಿರುದ್ಧ ಸುನಿಲ್ ಬೋಸ್ ಸ್ಪರ್ಧಿಸಿದ್ದಾರೆ. ಅಲ್ಲಿಯೂ ಕಾಂಗ್ರೆಸ್ ಪರವಾದ ಒಲವು ಇದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.
ಆದರೆ, ಬೆಂಗಳೂರು ದಕ್ಷಿಣದಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದು, ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ನ ಸೌಮ್ಯಾ ರೆಡ್ಡಿ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ಅಂತೆಯೇ, ಜೆಡಿಎಸ್ನ ಹಾಲಿ ಸಂಸದ, ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ವಿರುದ್ಧ ಮಂಡ್ಯದಲ್ಲಿ ಸ್ಟಾರ್ ಚಂದ್ರು ಕಣಕ್ಕಿಳಿದಿದ್ದು ಉತ್ತಮ ಪ್ರದರ್ಶನ ನೀಡಬಹುದು ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೂ, ಫಲಿತಾಂಶದ ಬಗ್ಗೆ ಇನ್ನೂ ಗೊಂದಲಗಳಿವೆ.
ಕರ್ನಾಟಕದಲ್ಲಿ 18-20 ಸ್ಥಾನಗಳನ್ನು ಗೆಲ್ಲಲಿದ್ದೇವೆ ಮತ್ತು ಉತ್ತರ ಕರ್ನಾಟಕದಲ್ಲಿ ನಾವು ಸುಮಾರು 10 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.