ದೆಹಲಿ-ವಡೋದರಾ ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ವಾಶ್‌ರೂಮ್‌ನಲ್ಲಿ ‘ಬಾಂಬ್’ ಇದೆ ಎಂದು ಬರೆಯಲಾಗಿದ್ದ ಟಿಶ್ಯೂ ಪೇಪರ್ ಪತ್ತೆಯಾಗಿದ್ದು, ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಭಯ-ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬುಧವಾರ ಸಂಜೆ ಆ ಪೇಪರ್ ಪತ್ತೆಯಾದ ಬಳಿಕ, ವಿಮಾನದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ, ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಅದೊಂದು ನಕಲಿ ಸಂದೇಶ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವಿಮಾನ ಸಿಬ್ಬಂದಿಗೆ ಸಂಜೆ 7 ಗಂಟೆ ಸುಮಾರಿನಲ್ಲಿ ‘ಬಾಂಬ್’ ಬಗ್ಗೆ ಬರೆಯಲಾಗಿದ್ದ ಟಿಶ್ಯೂ ಪೇಪರ್ ಸಿಕ್ಕಿದೆ. ಕೂಡಲೇ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ, ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಆದರೆ, ಸಂಶಯಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ, ಪ್ರಯಾಣಿಕರು ಮತ್ತೊಂದು ವಿಮಾನದಲ್ಲಿ ವಡೋದರಾಗೆ ಪ್ರಮಾಣ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.