ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತಿ ಹೊಂದಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ಸ್ಥಾನ ಪಡೆಯಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಪುನರುಚ್ಚರಿಸಿದ್ದಾರೆ.
ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಇಂದು, ಲಕ್ನೋದಲ್ಲಿ ನಾನು ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡುವಂತೆ ಯುಪಿ ಮತದಾರರಲ್ಲಿ ವಿನಂತಿಸಲು ಬಂದಿದ್ದೇನೆ. ನಾನು ನಾಲ್ಕು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ” ಎಂದರು.
ಇದನ್ನು ಓದಿದ್ದೀರಾ? 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಸಿದ್ಧವೇ: ಮೋದಿಗೆ ರೇವಂತ್ ರೆಡ್ಡಿ ಪ್ರಶ್ನೆ
“ಎರಡನೆಯದಾಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ 2-3 ತಿಂಗಳೊಳಗೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗುವುದು. ಮೂರನೆಯದಾಗಿ ಅವರು (ಬಿಜೆಪಿ) ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದು ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ತೆಗೆದುಹಾಕುತ್ತಾರೆ. ನಾಲ್ಕನೇ ವಿಚಾರ ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ” ಎಂದು ಹೇಳಿದರು.
“ಬಿಜೆಪಿ 220 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತಿದೆ ಮತ್ತು ಪ್ರತಿಪಕ್ಷಗಳ ಇಂಡಿಯಾ ಬ್ಲಾಕ್ ತನ್ನ ಸರ್ಕಾರವನ್ನು ರಚಿಸಲಿದೆ” ಎಂದು ಕೂಡಾ ಕೇಜ್ರಿವಾಲ್ ಈ ಸಂದರ್ಭದಲ್ಲೇ ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? 75ಕ್ಕೆ ನಿವೃತ್ತಿ: ಅಮಿತ್ ಶಾ ಹಳೆಯ ಹೇಳಿಕೆ ಕೆದಕಿದ ಆಮ್ ಆದ್ಮಿ ಪಾರ್ಟಿ
“2025ರ ಸೆಪ್ಟೆಂಬರ್ 17ಕ್ಕೆ ಪ್ರಧಾನಿ ಮೋದಿಗೆ 75 ವರ್ಷ ತುಂಬಲಿದೆ. ಅಮಿತ್ ಶಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಮತ್ತು ಸೆಪ್ಟೆಂಬರ್ 17, 2025ಕ್ಕೆ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದರು.
“75 ವರ್ಷಗಳ ನಂತರ ನಿವೃತ್ತಿಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಇನ್ನೂ ಹೇಳಿಲ್ಲ. ಪ್ರಧಾನಿ ಮೋದಿ ಅವರು ಈ ನಿಯಮವನ್ನು ಮಾಡಿದ್ದಾರೆ ಮತ್ತು ಅವರು ಈ ನಿಯಮವನ್ನು ಅನುಸರಿಸುತ್ತಾರೆ ಎಂದು ನನಗೆ ಸಂಪೂರ್ಣ ಭರವಸೆ ಇದೆ” ಎಂದು ಕೇಜ್ರಿವಾಲ್ ಟಾಂಗ್ ನೀಡಿದರು.
ಈ ಹಿಂದೆ ಮೇ 11ರಂದು ಕೂಡಾ ಅರವಿಂದ್ ಕೇಜ್ರಿವಾಲ್ ಅವರು, ಮೋದಿ ನಿವೃತ್ತಿ ಬಳಿಕ ಅಮಿತ್ ಶಾ ಅವರು ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದರು.
#WATCH | Delhi CM Arvind Kejriwal says “…These people ask the INDIA alliance who will be their Prime Minister. I ask BJP who will be your Prime Minister? PM Modi is turning 75, on 17th September. He made a rule that leaders in the party would retire after 75 years…LK Advani,… pic.twitter.com/P1qYOl7hIt
— ANI (@ANI) May 11, 2024
ಇನ್ನು “ಬಿಜೆಪಿಗೆ 220 ಕ್ಕಿಂತ ಕಡಿಮೆ ಸ್ಥಾನಗಳು ಬರುತ್ತಿವೆ ಎಂದು ಪ್ರಸ್ತುತ ವಿದ್ಯಾಮಾನ ಹೇಳುತ್ತದೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಯುಪಿ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಅವರ ಸ್ಥಾನಗಳು ಕಡಿಮೆಯಾಗಲಿವೆ. ಬಿಜೆಪಿ ತನ್ನ ಸರ್ಕಾರವನ್ನು ರಚಿಸಲಾಗದು, ಇಂಡಿಯಾ ಮೈತ್ರಿಕೂಟವು ತನ್ನ ಸರ್ಕಾರವನ್ನು ರಚಿಸಲಿದೆ” ಎಂದು ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಭರವಸೆ ವ್ಯಕ್ತಪಡಿಸಿದರು.