ಹಾಸನ ಜಿಲ್ಲೆಯಲ್ಲಿ ಗುರುವಾರ(ಮೇ 16) ಮಧ್ಯಾಹ್ನ ನಡೆದ ದಾರುಣ ಘಟನೆಯೊಂದರಲ್ಲಿ ಕೆರೆಯಲ್ಲಿ ಈಜಲೆಂದು ಹೋಗಿದ್ದ ನಾಲ್ವರು ಮಕ್ಕಳು ನೀರುಪಾಲಾಗಿದ್ದಾರೆ.
ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟಿರುವ ಬಾಲಕರನ್ನು ಜೀವನ್ (13), ಸಾತ್ವಿಕ್ (11), ವಿಶ್ವ(12), ಪೃಥ್ವಿ (12 ) ಎಂದು ಗುರುತಿಸಲಾಗಿದ್ದು, ಮೃತ ಮಕ್ಕಳು ಮುತ್ತಿಗೆ ಗ್ರಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಲೆಗೆ ರಜೆ ಇರುವುದರಿಂದ ಕೆರೆಗೆ ಐವರು ಬಾಲಕರು ಈಜಲು ತೆರಳಿದ್ದರು. ಈ ಪೈಕಿ ಓರ್ವ ಬಾಲಕ ಪಾರಾಗಿ ಸಮೀಪದಲ್ಲಿದ್ದವರಿಗೆ ತಿಳಿಸಿದ್ದಾನೆ. ನಿವಾಸಿಗಳು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಕೆರೆಯಲ್ಲಿ ಮುಳುಗಿ ಆಗಿತ್ತು ಎಂದು ತಿಳಿದುಬಂದಿದೆ.
ಸ್ಥಳಕ್ಕಾಗಮಿಸಿರುವ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆರೆಯ ಸಮೀಪ ಜನರು ಧಾವಿಸುತ್ತಿದ್ದಾರೆ.
ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದು, ಓರ್ವ ಬಾಲಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಆಲೂರು ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಸ್ಥಳಕ್ಕೆ ಆಗಮಿಸಿದ್ದು ಕುಟುಂಬಸ್ಥರನ್ನು ಸಂತೈಸಿದ್ದಾರೆ.
