ತುಮಕೂರು ಜಿಲ್ಲೆಯ ಬೆಳ್ಳಾವಿ ಬ್ಲಾಕ್‌ನ ಕಾಂಗ್ರೆಸ್ ಅಧ್ಯಕ್ಷ ಹಾಲನೂರು ಲೇಪಾಕ್ಷ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ವಜಾಗೊಳಿಸಬೆಕೆಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸೈಯದ್ ಸದಾತ್, ಕಾರ್ಯಕರ್ತ ರಘುಕುಮಾರ್, ಹರ್ಷವರ್ಧನ್ ಅವರು ಲೇಪಾಕ್ಷ ಅವರನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ. “ಕಾಂಗ್ರೆಸ್ ತನ್ನ ತತ್ವ, ಸಿದ್ದಾಂತದ ಮೇಲೆ ನಡೆದುಕೊಂಡು ಬಂದಿರುವ ಪಕ್ಷ. ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷಕ್ಕೆ ಹೆಚ್ಚು ಬೆಲೆಯಿದೆ. ಆದರೆ, ಜೆಡಿಎಸ್‌ನಿಂದ ಕಾಂಗ್ರೆಸ್ ಬಂದಿರುವ ಲೇಪಾಕ್ಷ ಅವರು ಕಾಂಗ್ರೆಸ್ ಸಿದ್ದಾಂತಗಳನ್ನು ಪಾಲಿಸದೆ, ಹಳೆಯ ಪಕ್ಷದ ರೀತಿಯಲ್ಲಿ ವ್ಯಕ್ತಿ ಪೂಜೆಗೆ ಮುಂದಾಗಿದ್ದಾರೆ. ಇದರಿಂದ ಮೂಲ ಕಾಂಗ್ರೆಸಿಗರು ಮುಜುಗರ ಅನುಭವಿಸುವಂತಾಗಿದೆ” ಎಂದು ದೂರಿದ್ದಾರೆ.
“ಆಗ್ನೇಯ ಶಿಕ್ಷಕರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಡಿ.ಟಿ. ಶ್ರೀನಿವಾಸ್ ಕಣದಲ್ಲಿದ್ದಾರೆ. ನಾಮಪತ್ರವನ್ನು ಸಹ ಸಲ್ಲಿಸಿದ್ದಾರೆ. ಆದರೆ, ಹಾಲೆನೂರು ಲೇಪಾಕ್ಷ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅವರ ಪರ ಕೆಲಸ ಮಾಡುವ ಬದಲು, ಪಕ್ಷೇತರ ಅಭ್ಯರ್ಥಿ ಶಿವರಾಜ್ ಎಂಬುವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಅವರನ್ನು ಪಕ್ಷದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.