ಕ್ರೀಡಾ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡ ಕ್ರಿಕೆಟ್ ಲೀಗ್ ಇದ್ದರೆ ಅದು ಐಪಿಎಲ್. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್. 2008ರಲ್ಲಿ ಐಪಿಎಲ್ ಸ್ಟಾರ್ಟ್ ಆಗಿದೆ. 17ನೇ ವಸಂತಕ್ಕೆ ಕಾಲಿಟ್ಟಿರುವ ಐಪಿಎಲ್ 2024ರ ಟೂರ್ನಿಯ ಎಲ್ಲ ಲೀಗ್ ಪಂದ್ಯಗಳು ಬಹುತೇಕ ಮುಗಿಯುತ್ತ ಬಂದಿದೆ.
2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ರೋಚಕ ಹಂತವನ್ನು ತಲುಪಿದ್ದು, ಯಾವೆಲ್ಲ ತಂಡಗಳು ಪ್ಲೇ-ಆಫ್‌ಗೆ ಪ್ರವೇಶಿಸಲಿವೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಪ್ಲೇ-ಆಫ್ ಸ್ಥಾನಗಳನ್ನು ಖಚಿತಪಡಿಸಿವೆ. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕಳೆದ ನಾಲ್ಕು ಪಂದ್ಯದಲ್ಲಿ ಸೋತಿದೆ. ಆದರೂ ಕೂಡ ಪ್ಲೇ-ಆಫ್ ಪ್ರವೇಶಿಸಿದೆ. ಅದಕ್ಕೆ ಕಾರಣ, ಡೆಲ್ಲಿ ವಿರುದ್ಧ ಲಕ್ನೋ ಸೋತದ್ದು. ಉಳಿದೆರಡು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಈ ಪೈಕಿ ಚೊಚ್ಚಲ ಕಿರೀಟ ಧರಿಸಲು ಎದುರು ನೋಡುತ್ತಿರುವ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಬಹುದೇ ಎಂಬುದು ಅಭಿಮಾನಿಗಳ ಮನಸ್ಸಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಈವರೆಗೆ 13 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಆರು ಗೆಲುವು ಹಾಗೂ ಏಳು ಸೋಲಿನೊಂದಿಗೆ ಒಟ್ಟು 12 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಲ್ಲದೆ +0.387 ನೇಟ್ ರನ್‌ರೇಟ್ ಕಾಯ್ದುಕೊಂಡಿದೆ.
SRH HAVE A GREAT CHANCE TO FINISH IN TOP 2. 🤯⭐ pic.twitter.com/mrstUwhKS9
— Mufaddal Vohra (@mufaddal_vohra) May 15, 2024
ಸನ್‌ರೈಸರ್ಸ್ ಹೈದರಾಬಾದ್ ಬಳಿ 12 ಅಂಕಗಳಿದ್ದು, ಇನ್ನೆರಡು ಪಂದ್ಯಗಳು ಬಾಕಿ ಉಳಿದಿದೆ. ಹಾಗಾಗಿ ಕನಿಷ್ಠ ಒಂದರಲ್ಲಿ ಗೆದ್ದರೆ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಹೈದರಾಬಾದ್ ಮೇ 16(ಇಂದು) ಗುಜರಾತ್ ಹಾಗೂ ಮೇ 19ರಂದು ಪಂಜಾಬ್ ವಿರುದ್ಧ ಪಂದ್ಯವನ್ನಾಡಲಿದೆ. ಇವುಗಳ ಪೈಕಿ ಒಂದರಲ್ಲಿ ಗೆದ್ದರೂ ಸಾಕು, ಪ್ಲೇ ಆಫ್‌ಗೆ ಪ್ರವೇಶಿಸಲಿದೆ.
ಆರ್‌ಸಿಬಿಗೆ ಖುಲಾಯಿಸಬಹುದೇ 18ರ ಅದೃಷ್ಟ?
ಆರ್‌ಸಿಬಿ ಪ್ಲೆ-ಆಫ್‌ಗೆ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದರೆ ಆರ್‌ಸಿಬಿ ಕನಿಷ್ಠ 18 ರನ್ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್ ಮಾಡಿದ್ದಲ್ಲಿ 18.1 ಓವರ್‌ನಲ್ಲಿ ಗೆಲುವು ದಾಖಲಿಸಬೇಕಿದೆ.
If RCB Vs CSK turns out to be a knockout match:
– RCB will need to win by 18 runs or chase in 18.1 overs to surpass CSK’s NRR. pic.twitter.com/GCtEEx0OCu
— Mufaddal Vohra (@mufaddal_vohra) May 12, 2024
ಇದನ್ನು ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 200 ರನ್ ಗಳಿಸಿದ್ದಲ್ಲಿ ಎದುರಾಳಿ ತಂಡವನ್ನು 182ಕ್ಕೆ ನಿಯಂತ್ರಿಸಬೇಕು. ಹಾಗಾದಾಗ ಮಾತ್ರ ಸಿಎಸ್‌ಕೆಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ ನಾಲ್ಕನೇ ತಂಡವಾಗಿ ಆರ್‌ಸಿಬಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿದೆ.
ಆರ್‌ಸಿಬಿ ಪ್ಲೇ-ಆಫ್ ಪ್ರವೇಶಿಸಲು ಬೇರೆ ದಾರಿಯೇ ಇಲ್ಲವಾ ಅಂದರೆ, ಅದಕ್ಕೂ ಇದೆ. ಒಂದು ವೇಳೆ ಸಿಎಸ್‌ಕೆ ವಿರುದ್ಧ ಇದಕ್ಕೂ ಕಡಿಮೆ ಅಂತರದಲ್ಲಿ ಆರ್‌ಸಿಬಿ ಗೆದ್ದರೆ ಹೈದರಾಬಾದ್ ಉಳಿದೆರಡು ಪಂದ್ಯಗಳಲ್ಲಿ ಸೋಲಬೇಕು. ಹಾಗೊಂದು ವೇಳೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸೋತರೆ ಅಥವಾ ಪಂದ್ಯ ರದ್ದುಗೊಂಡರೆ ಆರ್‌ಸಿಬಿ ಟ್ರೋಫಿ ಕನಸು ಅಷ್ಟೇ.
ಇನ್ನೊಂದು ಆಶ್ಚರ್ಯಕರ ಸಂಗತಿ ಇದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಹೈದರಾಬಾದ್ ತಂಡ, ಎರಡೂ ಪಂದ್ಯದಲ್ಲಿ 20-30 ರನ್‌ಗಳ ಅಂತರದಿಂದ ಸೋತರೆ ಆರ್‌ಸಿಬಿ ಹಾಗೂ ಚೆನ್ನೈ ಎರಡೂ ಕೂಡ ಪ್ಲೇ ಆಫ್‌ಗೆ ಹೋಗುವ ಸಾಧ್ಯತೆಯೂ ಇದೆ.
ಇನ್ನು 14 ಪಂದ್ಯಗಳಲ್ಲಿ ಅಷ್ಟೇ ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ (-0.377 ರನ್ ರೇಟ್) ಹಾಗೂ 13 ಪಂದ್ಯಗಳಲ್ಲಿ 12 ಅಂಕ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಪ್ಲೇ-ಆಫ್‌ಗೆ ಪ್ರವೇಶಿಸುವ ಸಾಧ್ಯತೆ ಕ್ಷೀಣವಾಗಿದೆ. ಲಕ್ನೋ ಪಾಲಿಗೆ ಇನ್ನೊಂದು ಪಂದ್ಯ ಬಾಕಿ ಉಳಿದರೂ ಕಳಪೆ ರನ್‌ರೇಟ್ (-0.787) ಹೊಂದಿದೆ. ಶೇ.90ರಷ್ಟು ಚಾನ್ಸಿಲ್ಲ.
ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದು ಪ್ಲೇ ಆಫ್ ಕನಸನ್ನೇ ಮರೆತಿದ್ದ ಆರ್‌ಸಿಬಿ ಬಳಿಕ ಸತತ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ‘ಬಿಗ್ ಫೈಟ್’ ಕುತೂಹಲ ಹೆಚ್ಚಿಸಿದೆ. ಅದೃಷ್ಟ ಕೈಹಿಡಿದು, ಸಿಎಸ್‌ಕೆ ವಿರುದ್ಧ ಗೆದ್ದರೆ ಆರ್‌ಸಿಬಿ ಪ್ಲೇ-ಆಫ್ ತಲುಪುವುದು ಖಚಿತ. ಅದು ಲೆಕ್ಕಾಚಾರದ ಮೂಲಕ ಮಾತ್ರ.
ಬೆಂಗಳೂರು ತಂಡವನ್ನು ಹೇಗೇ ಸೋಲಿಸಿದರೂ ಚೆನ್ನೈ ಪ್ಲೇ-ಆಫ್ ಪ್ರವೇಶಿಸುವ ಅವಕಾಶವಿದೆ. ಇಲ್ಲ ಸಣ್ಣ ಅಂತರದಲ್ಲಿ ಸೋತರೂ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸುತ್ತದೆ. ಇಲ್ಲಿ ಸದ್ಯ ಎರಡೂ ತಂಡಗಳಿಗೆ ಬಹುಮುಖ್ಯ ಪಂದ್ಯ ಅನ್ನುವುದರಲ್ಲಿ ಅನುಮಾನವೇ ಬೇಡ. ನಿಜ ಹೇಳ್ಬೇಕು ಅಂದರೆ ಐಪಿಎಲ್‌ನ ಮೇ 18ರ ಪಂದ್ಯ, ಅಂದರೆ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯಕ್ಕಿರುವ ಭಾರೀ ಕುತೂಹಲ, ಫೈನಲ್ ಪಂದ್ಯಕ್ಕೆ ಇರಲಿಕ್ಕಿಲ್ವೇನೋ ಅಂತ ಅನ್ನಿಸ್ತಾ ಇದೆ.

“ಪಂದ್ಯ ನಡೀತಾ ಇರೋದು ಮೇ 18, ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18, ಗೆಲ್ಲಬೇಕಿರುವುದು 18 ರನ್‌ಗಳಿಂದ, ಡಿಫೆಂಡ್ ಮಾಡಬೇಕಿರುವುದು 18 ಓವರ್‌ಗಳಲ್ಲಿ….” ಇಂತಹ ಚರ್ಚೆಯ ಪೋಸ್ಟರ್, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.
ಭರ್ಜರಿ ಫಾರ್ಮ್ ಕಾಯ್ದುಕೊಂಡಿದ್ದ ಇಂಗ್ಲೆಂಡ್‌ನ ಆಟಗಾರ, ಆರ್‌ಸಿಬಿಯ ಸ್ಫೋಟಕ ಬ್ಯಾಟರ್ ವಿಲ್ ಜಾಕ್ಸ್ ಮೇ 18ರ ಪಂದ್ಯದಲ್ಲಿ ಆಡುತ್ತಿಲ್ಲ. ಕಾರಣ, ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ತವರು ಟೀಮ್ ಮ್ಯಾಚ್‌ಗಳತ್ತ ಮುಖ ಮಾಡಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ತಂದಿರುವ ವಿಷಯ. ವಿಲ್ ಜಾಕ್ಸ್ ಬದಲಿಗೆ ಮ್ಯಾಕ್ಸ್‌ವೆಲ್ ಆಡುವ ಸಾಧ್ಯತೆ ಇದೆ. ಇವರೂ ಕೂಡ ಯಾವ ಕ್ಷಣದಲ್ಲಾದರೂ ಸ್ಫೋಟಕವಾಗಿ ಆಟವಾಡಬಲ್ಲ ಆಟಗಾರ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಸತತ ಸೋಲುಗಳ ಬಳಿಕ ಫೀನಿಕ್ಸ್‌ನಂತೆ ಎದ್ದು ಬಂದಿದ್ದ ಆರ್‌ಸಿಬಿ ಮಹಿಳೆಯರ ತಂಡ, ಆ ಬಳಿಕ ಎಲ್ಲ ಪಂದ್ಯಗಳನ್ನು ಗೆದ್ದು, ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಕಪ್ ಎತ್ತಿಹಿಡಿದಿತ್ತು. ಆ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತಲ್ಲದೇ, ‘ಹೆಣ್ಣಕ್ಳೇ ಸ್ಟ್ರಾಂಗು ಗುರೂ’ ಅನ್ನೋದನ್ನೂ ಸಾರಿದ್ದರು.
ಇದು ಆರ್. ಸಿ. ಬಿ ಯ ಹೊಸ ಅಧ್ಯಾಯ….. ರಾಯಲ್ ಚಾಲೆಂಜರ್ಸ್ ಬೆಂಗಳೂರು
ROYAL CHALLENGERS BENGALURU…….RCB!!!#RCBUnbox pic.twitter.com/CX0EvgOE9j
— Karnataka Weather (@Bnglrweatherman) March 19, 2024
ಪುರುಷರ ಐಪಿಎಲ್‌ನಲ್ಲಿ ಕೂಡ ಅದೇ ರೀತಿಯ ಘಟನೆ ಮರುಕಳಿಸುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಆರ್‌ಸಿಬಿಯ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಒಂದು ಮಾತು ಕನ್ನಡದಲ್ಲೇ ಹೇಳಿದ್ದರು….”ಇದು ಆರ್‌ಸಿಬಿಯ ಹೊಸ ಅಧ್ಯಾಯ”…. ಹಾಗೇನೇ ಆಗುತ್ತಾ. ಹಾಗೆಯೇ ಆಗಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಪ್ರಾರ್ಥನೆ. ಯಾವುದಕ್ಕೂ ಮೇ 18ರವರೆಗೆ ಕಾದು ನೋಡೋಣ.
RCB winning against CSK in the Star Sports social buzz for the Final Showdown. pic.twitter.com/PKULpbpeTF
— Mufaddal Vohra (@mufaddal_vohra) May 15, 2024
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.