ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯ ಬಾತ್ ರೂಮ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡದಿದೆ.
ಮನೆಯ ಬಾತ್ ರೂಮ್‌ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಪ್ರಭುಧ್ಯಾ (21) ಸಾವನ್ನಪ್ಪಿದ ಯುವತಿ.
ಯುವತಿಯ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರಭುಧ್ಯಾ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.
“ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯವಳಲ್ಲ. ಯಾರೋ ಕೊಲೆ ಮಾಡಿದ್ದಾರೆ. ನನ್ನ ಮಗಳು ನನಗೆ ಮಧ್ಯಾಹ್ನ ಕರೆ ಮಾಡಿದ್ದಳು. ಆಫೀಸ್‌ನಲ್ಲಿದ್ದೇನೆ, ಪಾನಿಪುರಿ ತಿಂದು ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಳು. ನಾನು ಆಫೀಸ್ ಮುಗಿಸಿ ಮನೆಗೆ ಬಂದು ನೋಡಿದಾಗ ಮಗಳು ಬಾತ್ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು” ಎಂದು ತಾಯಿ ಸೌಮ್ಯ ಕಣ್ಣೀರು ಹಾಕಿದ್ದಾರೆ.
“ಪ್ರತಿದಿನ ಕಾಲೇಜಿನಿಂದ ಮನೆಗೆ ಬಂದ ಕೂಡಲೇ ಸೇಫ್ ಆಗಿ ತಲುಪಿದ್ದಕ್ಕೆ ಮೇಸೆಜ್ ಮಾಡುತ್ತಿದ್ದಳು. ಎಜುಕೇಷನ್ ಸಿಸ್ಟಮ್ ಪ್ರಶ್ನೆ ಮಾಡುತ್ತಿದ್ದಳು. ಮನೆಯ ಹಿಂಬದಿ ಡೋರ್ ಓಪನ್ ಆಗಿದೆ. ನನ್ನ ಮಗಳ ಮೊಬೈಲ್ ಕಳೆದು ಹೋಗಿದೆ. ನನ್ನ ಮಗಳನ್ನ ಕ್ರೂರವಾಗಿ ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್-ರೇವಣ್ಣ ಲೈಂಗಿಕ ಹಗರಣ | ರೇವಣ್ಣಗೆ ಒಂದು ದಿನದ ಮಟ್ಟಿಗೆ ಜಾಮೀನು
ಇನ್ನು ಈ ಪ್ರಕರಣದ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಲೊಕೇಶ್ ಪ್ರತಿಕ್ರಿಯಿಸಿದ್ದು, “ಮೇ 15ರ ಸಂಜೆ 7:30ರ ಸುಮಾರಿಗೆ ಈ ಘಟನೆ ವರದಿಯಾಗಿದೆ. 21 ವರ್ಷದ ವಿದ್ಯಾರ್ಥಿಯ ಕೈ ಹಾಗೂ ಕುತ್ತಿಗೆಗೆ ಚಾಕು ಇರಿತ ಆಗಿದೆ. ಮನೆಯ ಬಾತ್ ರೂಂನಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯಾ ಅನ್ನೋದು ತನಿಖೆ ನಡೆಯುತ್ತಿದೆ. ಮನೆಯವರು ಸಾವಿನ ಹಿಂದೆ ಅನುಮಾನ ಇದೆ ಎಂದು ದೂರು ನೀಡಿದ್ದಾರೆ. ಈಗ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದರು.