ಪ್ರಧಾನಿ ನರೇಂದ್ರ ಮೋದಿ ಅವರು ಮೇ 15 ರಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಜನರಿಗೆ ಹೇಳಿದರು, “140 ಕೋಟಿ ದೇಶವಾಸಿಗಳ ಪ್ರೀತಿ ಮತ್ತು ಆಶೀರ್ವಾದ ನನ್ನ ನಿಜವಾದ ಶಕ್ತಿ” ಎಂದು ಹೇಳಿದ್ದಾರೆ. ಇತ್ತೀಚೆಗೆ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ “ನನ್ನನ್ನು ಸರ್ವಾಧಿಕಾರಿ ಎಂದು ಬಣ್ಣಿಸುವ ಮೂಲಕ ಪ್ರತಿಪಕ್ಷಗಳು 140 ಕೋಟಿ ಭಾರತೀಯರಿಗೆ ಅವಮಾನ ಮಾಡುತ್ತಿವೆ” ಎಂದಿದ್ದಾರೆ. ಆ ಮೂಲಕ, ನಾನು 140 ಕೋಟಿಯ ಪ್ರತಿನಿಧಿ ಎಂದೂ ಅವರು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಮಾರ್ಚ್ 4ರಮದು ಅದಿಲಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ‘ದೇಶದ 140 ಕೋಟಿ ಜನರು ನನ್ನ ಕುಟುಂಬ’ ಎಂದಿದ್ದರು. ಮಾರ್ಚ್ 16ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ‘140 ಕೋಟಿ ಜನರ ಪ್ರಾಯೋಜಿತ’ ಎಂದು ಬರೆದಿಕೊಂಡಿದ್ದಾರೆ.
ಫೆಬ್ರವರಿ 8 ರಂದು ಸಂಸತ್ತಿನಲ್ಲಿ ಭಾರತದ ರಾಷ್ಟ್ರಪತಿಗಳಿಗೆ ಧನ್ಯವಾದ ಸಲ್ಲಿಸುವಾಗ ಮಾತನಡಿದ ಮೋದಿ, “ಪ್ರತಿಪಕ್ಷಗಳು ತಮ್ಮ ಸರ್ಕಾರದ ವಿರುದ್ಧ ಮಾಡಿದ ಟೀಕೆಗಳು ಸುಳ್ಳು ಆರೋಪಗಳಾಗಿವೆ. ನಾವು 140 ಕೋಟಿ ಜನರ ಆಶೀರ್ವಾದದೊಂದಿಗೆ ನಡೆಯುತ್ತಿದ್ದೇವೆ. 140 ಕೋಟಿ ಭಾರತೀಯರು ನಮ್ಮ ಸುರಕ್ಷಾ ಕವಚ” ಎಂದು ಹೇಳಿದ್ದರು.
ಹೀಗೆ, ಮೋದಿ ಅವರು ನಿರಂತರವಾಗಿ 140 ಕೋಟಿ ಜನರ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ದೇಶದ ಜನರು ತಮ್ಮೊಂದಿಗಿದ್ದಾರೆ ಎಂಬುದನ್ನು ಒತ್ತಿ-ಒತ್ತಿ ಹೇಳುತ್ತಿದ್ದಾರೆ. ಆದರೆ, ಅವರು ನಿಜಕ್ಕೂ 140 ಕೋಟಿ ಜನರ ಪ್ರತಿನಿಧಿಯೇ ಎಂಬುದು ಪ್ರಮುಖ ಪ್ರಶ್ನೆ.
2002ರಲ್ಲಿ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ಅನ್ನು ಭಯಾನಕ ಪ್ರಯೋಗಾಲಯವಾಗಿ ಮಾರ್ಪಡಿಸಿದ್ದರು. ಅದಕ್ಕಾಗಿ, ತೀವ್ರ ಟೀಕೆಗಳನ್ನು ಎದುರಿಸಿದ್ದರು. ಆಗ ಅವರು ತಾವು ‘ಗುಜರಾತ್‌ನ ಆರು ಕೋಟಿ ಜನರ ಪ್ರತಿನಿಧಿ’ ಎಂದು ಹೇಳಿಕೊಂಡಿದ್ದರು. ಇದೀಗ, ಅವರು 140 ಕೋಟಿ ಜನರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಿದ್ದಾರೆ.
ಮೋದಿಯಂತಹ ನಾಯಕ, ತನ್ನ ಇಮೇಜ್‌ಗೆ ಹೆಚ್ಚಿನ ಆದ್ಯತೆ ನೀಡಿದಾಗ ತಾನು ಎಲ್ಲದಕ್ಕಿಂತ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ 140 ಕೋಟಿ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ.
ಪ್ರಾಯೋಗಿಕವಾಗಿ ಹೇಳುವುದಾದರೆ, ಬಿಜೆಪಿಗೆ ಮತ ಹಾಕುವವರೆಲ್ಲರೂ ಮೋದಿಗೆ ಮತ ಹಾಕುವವರೇ ಎಂದು ಲೆಕ್ಕ ಹಾಕಿದರೂ, ಅವರ ಸಂಖ್ಯೆ ಎಷ್ಟು? 2019ರಲ್ಲಿ ಬಿಜೆಪಿ 37.36% ಮತಗಳನ್ನು ಪಡೆದಿತ್ತು. ಅಂದರೆ, ಒಟ್ಟು 91.2 ಕೋಟಿ ಮತದಾರರಲ್ಲಿ, 22.82 ಕೋಟಿ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಇದು, 140 ಕೋಟಿ ಅಲ್ಲ.
2019ರಲ್ಲಿ 224 ಸ್ಥಾನಗಳಲ್ಲಿ ಹೆಚ್ಚಿನ ಅಂತರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಅದರಲ್ಲಿಯೂ, ಪ್ರದೇಶವಾರು ನೋಡಿದರೆ, ಈ ಅಂತರದಲ್ಲಿಯೂ ವ್ಯತ್ಯಾಸಗಳಿವೆ. ಭಾರತದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಹೆಚ್ಚಿನ ಅಂತರದಲ್ಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚಿನ ಅಂತರದಲ್ಲಿ ಗೆದ್ದರೂ, ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ವಿರಳ ಮತಗಳು ಬಂದಿವೆ. ಇದು, ತೀಕ್ಷ್ಮ ಮತ ದೃವೀಕರಣವನ್ನು ಸುಚಿಸುತ್ತದೆ.
ಅಂದಹಾಗೆ, 140 ಕೋಟಿ ಜನರ ಪ್ರತಿನಿಧಿ ಎನ್ನುವ ಮೋದಿ, ಸ್ವತಃ ತಾವೇ ಈ 140 ಜನರ ಪ್ರತಿನಿಧಿಯಲ್ಲ ಎಂಬುದು ಮೋದಿ ಅವರ ಮಾತಿನಲ್ಲಿಯೇ ಪ್ರತಿಬಿಂಬಿಸುತ್ತಿದೆ. ಅವರು ಮುಸ್ಲಿಮರನ್ನು ನುಸುಳುಕೋರರು ಎಂದು ಹೇಳುವ ಮೂಲಕ ಜನರನ್ನು ವಿಭಜಿಸಲು ಯತ್ನಿಸಿದರು. ‘ಹಿಂದೂ ವಿರೋಧಿ’ ಎಂದು ವಿಪಕ್ಷಗಳನ್ನು ಬಿಂಬಿಸಲು ಪ್ರಯತ್ನಿಸಿದರು. ಆ ಮೂಲಕ, ಮೋದಿ ತಾವು ಹಿಂದುತ್ವವಾದಿಗಳ ಪ್ರತಿನಿಧಿ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. ಹೀಗಾಗಿ, ಅವರು 140 ಕೋಟಿ ಜನರ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ.
ಇತರ ದೇಶಗಳಲ್ಲಿನ ದೌರ್ಜನ್ಯಗಳ ಬಗ್ಗೆ ಮಾತನಾಡುವಾಗಲೂ ಮೋದಿ ಅವರು ಹಿಂದು ವಿರೋಧಿ ಹಿಂಸೆಗಳಿಗೆ ಮಾತ್ರವೇ ಪ್ರತಿಕ್ರಿಯಿಸುತ್ತದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ದೇವಸ್ಥಾನಗಳ ಮೇಲಿನ ಗೀಚುಬರಹದ ವಿಷಯವನ್ನು ಮೋದಿ ಖುದ್ದಾಗಿ ಪ್ರಸ್ತಾಪಿಸಿದ್ದರು. ನಂತರ, ಸ್ಥಳೀಯ ಪೊಲೀಸರು ಇದು ಸ್ಥಳೀಯ ಸಂಸ್ಥೆಯ ಆಂತರಿಕ ವ್ಯವಹಾರವೆಂದು ತಿಳಿಸಿದ ಬಳಿಕ, ಆ ವಿಷಯದ ಬಗ್ಗೆ ಮೌನವಾದರು. ಇನ್ನು, ಮೋದಿ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದರ ಬಗ್ಗೆ ಈಗ ಚರ್ಚಿಸುವ ಅಗತ್ಯವಿಲ್ಲ.
ಇತ್ತೀಚೆಗೆ, ಏಪ್ರಿಲ್ 21ರಂದು ಮೋದಿ ಅವರು ರಾಜಸ್ಥಾನದ ಬನ್ಸ್‌ವಾರಾದಲ್ಲಿ ಮಾತನಾಡುವಾಗ ಅವರು 140 ಕೋಟಿ ಜನರ ಪ್ರತಿನಿಧಿಯಂತೆ ಮಾತನಾಡಲಿಲ್ಲ. ಅವರ ಭಾಷಣದ ಸಾಲುಗಳು ಕೋಮು ವಿಭಜನೆಯ ಪ್ರತೀಕವಾಗಿತ್ತು.
ಆದರೆ, ಮೇ 14ರಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಮೋದಿ, ತಮ್ಮ ‘ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು’ ಎಂಬ ಮಾತುಗಳು ಮುಸ್ಲಿಮರನ್ನು ಉದ್ದೇಶಿಸಿದ್ದಲ್ಲ. ತಮ್ಮ ಮಾತುಗಳು ಬೇರೆ ಸಮಸ್ಯೆಗಳನ್ನು ಉದ್ದೇಶಿಸಿದ್ದವು ಎಂದು ತೇಪೆ ಬಳಿಯುವ ಪ್ರಯತ್ನ ಮಾಡಿದ್ದಾರೆ. ಆದರೂ, ಆಧುನಿಕ ಭಾರತೀಯ ರಾಜಕೀಯದಲ್ಲಿ ಅವರ ದ್ವೇಷ ಭಾಷಣವು ಸೃಷ್ಟಿಸಬಹುದಾದ ದೀರ್ಘಾವಧಿಯ ಹಾನಿಯನ್ನು ಸರಿಪಡಿಸಲು ಅವರು ಈ ತೇಪೆ ಹಚ್ಚುವ ಮಾತುಗಳನ್ನಾಡಿದ್ದಾರೆ ಎಂದು ಯಾರಾದರೂ ಊಹಿಸಬಹುದು. ಆದರೆ, ಚುನಾವಣಾ ಫಲಿತಾಂಶವನ್ನು ಲೆಕ್ಕಿಸದೆ, ಭಾರತೀಯರನ್ನು ವಿಭಜಿಸುವ ಅವರ ಮಾತುಗಳ ಪರಿಣಾಮವು ಈಗಾಗಲೇ ಭಾರತದ ಮೇಲೆ ಅಳಿಸಲಾಗದ ದ್ವೇಷದ ಮುದ್ರೆ ಹೊತ್ತಿದೆ. ಚುನಾವಣಾ ಆಯೋಗದ ಮೌನವು ಅದನ್ನು ಹೆಚ್ಚಾಗಿ ಪ್ರತಿನಿಧಿಸುತ್ತಿದೆ.
ಅವರ ಭಾಷಣಗಳು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತವೆ. ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ವಿಭಜಿಸುವ ಮತ್ತು ವಿಶ್ವದ ಅತ್ಯಂತ ಹಿಂದುಳಿದ ಮತ್ತು ನಿರಾಶ್ರಿತ ಜನರನ್ನು ರಾಕ್ಷಸರೆಂದು ಬಿಂಬಿಸಿದೆ. ಇದು 1950ರಿಂದ ಈವರೆಗೆ ಭಾರತದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದವರ ಪೈಕಿ, ಮೋದಿ ಅವರು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ.
ವೈವಿದ್ಯತೆಯುಳ್ಳು ಬೃಹತ್ ದೇಶದಲ್ಲಿ ಮೋದಿ ‘140 ಕೋಟಿ’ ಜನರನ್ನು ಪ್ರತಿಪಾದಿಸುವುದು ತಾತ್ವಿಕವಾಗಿ ತಪ್ಪು. ಅವರ ಮನ್ ಕಿ ಬಾತ್ ಎಂಬ ಒಮ್ಮುಖ ಕಾರ್ಯಕ್ರಮವು ಅವರು ರಾಜನಂತೆ ಮಾತನಾಡುವುದನ್ನು ಸೂಚಿಸುತ್ತದೆ.
ಹೀಗಾಗಿ, ಅವರು ಎಂದಿಗೂ 140 ಕೋಟಿ ಜನರ ಪ್ರತಿನಿಧಿಯಾಗಲೂ, ಪ್ರಜಾಪ್ರಭುತ್ವದ ಭರವಸೆಯನ್ನು ಪ್ರತಿಬಿಂಬಿಸಲು ಸಾಧ್ಯವೇ ಇಲ್ಲ.