ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಅವರು ತಮ್ಮ ಮೇಲೆ ಹಲ್ಲೆ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಬ್ಬಂದಿ ಬಿಭವ್ ಕುಮಾರ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಸ್ವಾತಿ ಮಲಿವಾಲ್ ಅವರು ತಮ್ಮ ದೂರಿನಲ್ಲಿ, ಬಿಭವ್ ಕುಮಾರ್ ಕೆನ್ನೆ, ಹೊಟ್ಟೆ ಮೇಲೆ ಹಲ್ಲೆ ಮಾಡಿರುವುದಲ್ಲದೆ ನನಗೆ ಒದ್ದಿದ್ದಾರೆ. ದೊಣ್ಣೆಯಿಂದ ಕೂಡ ಹಲ್ಲೆ ನಡೆಸಿದ್ದು, ದೇಹದ ಸೂಕ್ಷ್ಮ ಭಾಗಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಸೋಮವಾರ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ ಬಿಭವ್ ಕುಮಾರ್ ಅವರು ತಾವು ಮನವಿ ಮಾಡಿಕೊಂಡರೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಬಿಭವ್ ಕುಮಾರ್ ವಿರುದ್ಧ ದೂರು ದಾಖಲಾಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಸ್ವಾತಿ ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ಬಿಭವ್ ಕುಮಾರ್ ವಿರುದ್ಧ ದೌರ್ಜನ್ಯ, ಕ್ರಿಮಿನಲ್ ಬೆದರಿಕೆ, ಕೆಟ್ಟ ಪದಗಳು ಹಾಗೂ ಸನ್ನೆಗಳು ಹಾಗೂ ಹಲ್ಲೆ ಮಾಡಿರುವುದರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಎಸಿಪಿ ನೇತೃತ್ವದ ಪೊಲೀಸ್ ತಂಡ ಮಲಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ವಾತಿ ಮಲಿವಾಲ್, ನನಗೆ ಆಗಿರುವ ಬಗ್ಗೆ ತುಂಬ ದುಃಖವಾಗಿದೆ.ನನಗೆ ಆಗಿರುವ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ನನಗೆ ಭರವಸೆಯಿದೆ.ಕಳೆದ ಕೆಲವು ದಿನಗಳಿಂದ ನಾನು ತುಂಬ ಸಂಕಷ್ಟಕ್ಕೆ ಒಳಗಾಗಿದ್ದೆ.ನನಗಾಗಿ ಸಹಾಯ ಮಾಡಿದವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಬಿಜೆಪಿಯವರಿಗೆ ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ವಿಶೇಷ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
